ರಾಜ್ಯದ ವಿವಿಧೆಡೆ ಪಾಕಿಸ್ತಾನಿ ಪ್ರಜೆಗಳು ನೆಲೆಸಿದ್ದಾರೆಯೇ ಎನ್ನುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ: ಜಿ.ಪರಮೇಶ್ವರ್
ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪಾಕಿಸ್ತಾನಿ ಪ್ರಜೆಗಳು ನೆಲೆಸಿದ್ದಾರೆಯೇ ಎನ್ನುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದಿಂದ ಇಲ್ಲಿಗೆ ಬಂದು ಅಧಿಕೃತ ಹಾಗೂ ಅನಧಿಕೃತವಾಗಿ ಇರುವವರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಹಿಂದೆ ವಿದೇಶಿಗರು ನೆಲೆಸಿರುವ ಕುರಿತು ಅಧಿವೇಶನದಲ್ಲಿ ಪ್ರಶ್ನೆ ಕೇಳಿದಾಗ ಉತ್ತರ ನೀಡಿದ್ದೇವೆ. ಅದರಲ್ಲಿ ಪಾಕಿಸ್ತಾನಿ ಪ್ರಜೆಗಳು ಯಾರಿದ್ದಾರೆ, ಅಧಿಕೃತವಾಗಿ ಯಾರಿದ್ದಾರೆ ಎಂದು ತಿಳಿದು ಅವರನ್ನೆಲ್ಲ ವಾಪಸ್ ಕಳುಹಿಸಲೇಬೇಕಾಗುತ್ತದೆ ಎಂದರು.
ಕೇಂದ್ರ ಸರಕಾರ ವಾಪಸ್ ಕಳಿಸುವ ತೀರ್ಮಾನ ತೆಗೆದುಕೊಂಡಿದೆ. ಅನಧಿಕೃತವಾಗಿ ಇರುವುದರ ಬಗ್ಗೆ ಪರಿಶೀಲಿಸಬೇಕು. ಅಧಿಕೃತವಾಗಿ ಇರುವವರನ್ನು ಕಳಿಸುವುದಕ್ಕೆ ತಕರಾರಿಲ್ಲ. ಈಗಾಗಲೇ ವೀಸಾ ರದ್ದು ಮಾಡಲಾಗಿದೆ, ವಾಪಸ್ ಹೋಗಿ ಎಂದೂ ಹೇಳಿ ಕೇಂದ್ರ ಸರಕಾರ ಸೂಚನೆ ನೀಡಿದೆ. ಆದರೆ, ಅನಧಿಕೃತವಾಗಿ ಇಲ್ಲಿ ಇರುವವರನ್ನು ಪೊಲೀಸರು ಹುಡುಕ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಸರಕಾರ ರಾಷ್ಟ್ರದ ಭದ್ರತೆಯಲ್ಲಿ ಈಗಾಗಲೇ ಅವರು ಕೆಲವು ನಿರ್ಧಾರಗಳನ್ನು ರಾಜತಾಂತ್ರಿಕವಾಗಿ ತೆಗೆದುಕೊಂಡಿದ್ದಾರೆ. ಇನ್ನೂ ಹೆಚ್ಚು ಕಠಿಣ ನಿರ್ಧಾರಗಳನ್ನು ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಉಗ್ರ ಸಂಘಟನೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.