ರಾಜ್ಯಾದ್ಯಂತ ನ.14ರಿಂದ 20ರವರೆಗೆ ʼಅಖಿಲ ಭಾರತ ಸಹಕಾರಿ ಸಪ್ತಾಹʼ : ಜಿ.ಟಿ.ದೇವೇಗೌಡ
ಬೆಂಗಳೂರು : ಸಹಕಾರ ಕ್ಷೇತ್ರದ ಬೆಳವಣಿಗೆ ಪ್ರತಿವರ್ಷ ನ.14ರಿಂದ 20ರ ವರೆಗೆ ‘ಅಖಿಲ ಭಾರತ ಸಹಕಾರಿ ಸಪ್ತಾಹ’ವನ್ನು ಆಚರಣೆ ಮಾಡಲಾಗುತ್ತಿದ್ದು ಪ್ರತಿಯೊಬ್ಬರು ಈ ಸಪ್ತಾಹವನ್ನು ಹಬ್ಬದಂತೆ ಆಚರಿಸೋಣ ಎಂದು ರಾಜ್ಯ ಸಹಕಾರಿ ಮಹಾಮಂಡಳ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಕರೆ ನೀಡಿದ್ದಾರೆ.
ಗುರುವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು(ನ.14) 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಆಚರಣೆ ಕುರಿತ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ 72ನೇ ಅಖಿಲ ಸಹಕಾರಿ ಸಪ್ತಾಹ ರಾಜ್ಯಾದ್ಯಂತ ಏಳು ದಿನಗಳು ಕಾಲ ವಿವಿಧ ವಿಷಯಗಳ ಧ್ಯೇಯದೊಂದಿಗೆ ನಡೆಯಲಿದೆ, ನಾಳೆ(ನ.14) ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯದಕ್ಷತೆ, ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಡಿಜಿಟಲೀಕರಣವನ್ನು ಪ್ರೋತ್ಸಾಹಿಸುವುದು ಎಂಬ ಧ್ಯೇಯದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಸಹಕಾರ ಚಳವಳಿಯಲ್ಲಿ ಮುಖಂಡತ್ವ ವಹಿಸಿದ್ದ ದಿವಂಗತ ಬಿ.ಎಸ್.ವಿಶ್ವನಾಥ್ ಅವರ ಕಂಚಿನ ಪುತ್ಥಳಿಯನ್ನು ಸಹಕಾರ ಮಹಾಮಂಡಳದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಲಿದ್ದಾರೆ ಎಂದು ಜಿ.ಟಿ.ದೇವೇಗೌಡ ಹೇಳಿದರು.
ನವೆಂಬರ್ 15ರಂದು ರಾಯಚೂರಿನಲ್ಲಿ ಸಂಶೋಧನೆ ಮತ್ತು ತರಬೇತಿಯಿಂದ ಸಹಕಾರ ಶಿಕ್ಷಣದಲ್ಲಿ ಪರಿವರ್ತನೆ ಎಂಬ ವಿಷಯದೊಂದಿಗೆ, ನವೆಂಬರ್ 16ರಂದು ಮಂಗಳೂರಿನಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ ಎಂಬ ವಿಷಯದೊಂದಿಗೆ, ನವೆಂಬರ್ 17ರಂದು ಹೊಸಪೇಟೆಯಲ್ಲಿ ರಾಷ್ಟ್ರೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾರತದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ ಎಂಬ ವಿಷಯದೊಂದಿಗೆ ಸಪ್ತಾಹ ನಡೆಯಲಿದೆ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.
ನವೆಂಬರ್ 18ರಂದು ಹಾವೇರಿಯಲ್ಲಿ ಸಹಕಾರಿ ಉದ್ಯಮಶೀಲತೆಯಿಂದ ಯುವಜನ, ಮಹಿಳಾ ಮತ್ತು ಅಬಲ ವರ್ಗದ ಸಬಲೀಕರಣ ಎಂಬ ವಿಷಯದೊಂದಿಗೆ, ನವೆಂಬರ್ 19ರಂದು ಕೊಪ್ಪಳದಲ್ಲಿ ಪ್ರವಾಸೋದ್ಯಮ, ಆರೋಗ್ಯ, ಹಸಿರು ಇಂಧನ, ಪ್ಲಾಟ್ ಫಾರಂ, ಸಹಕಾರಿ ಸಂಸ್ಥೆಗಳು, ಕಿಚನ್ ಸಹಕಾರ ಸಂಘಗಳು ಮತ್ತಿತರ ಉದಯೋನ್ಮುಖ ಸಹಕಾರ ಸಂಘಗಳನ್ನು ಅನುಕೂಲಕರ ಪ್ರದೇಶಗಳಿಗೆ ವಿಸ್ತರಣೆ ಎಂಬ ವಿಷಯದೊಂದಿಗೆ ಹಾಗೂ ನವೆಂಬರ್ 20ರಂದು ಚಾಮರಾಜನಗರದಲ್ಲಿ ಜಾಗತಿಕ ಸ್ಪರ್ಧಾತ್ಮಕತೆಗಾಗಿ ನವನಾವೀನ್ಯತೆಯ ಸಹಕಾರಿ ವ್ಯವಹಾರದ ಮಾದರಿಗಳು ಎಂಬ ವಿಷಯದ ಕುರಿತ ಶೀರ್ಷಿಕೆಗಳಡಿ ಸಹಕಾರ ಸಪ್ತಾಹವನ್ನು ಆಚರಿಸಲಾಗುವುದು ಎಂದು ಜಿ.ಟಿ.ದೇವೇಗೌಡ ಮಾಹಿತಿ ನೀಡಿದರು.
ಸಹಕಾರ ಚಳುವಳಿಯನ್ನು ಬಲಪಡಿಸಲು ಸಹಕಾರ ಸಂಸ್ಥೆಗಳಿಗೆ ಸರಕಾರ ಅಗತ್ಯ ಮಾರ್ಗದರ್ಶನ ನೀಡುತ್ತಿದೆ. ರೈತರ ಅಭಿವೃದ್ಧಿಗಾಗಿ ಈ ವರ್ಷ 36 ಲಕ್ಷ ರೈತರಿಗೆ 27 ಸಾವಿರ ಕೋಟಿ ರೂ.ಗಳ ಬೆಳೆ ಸಾಲದ ಗುರಿಯನ್ನು ಹೊಂದಿದೆ. ಸಹಕಾರ ಸಂಸ್ಥೆಗಳಲ್ಲಿ ಸದಸ್ಯರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರುಗಳಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಅನುಷ್ಠಾನಗೊಳಿಸಿ, ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ. ಈಗಾಗಲೇ 41 ಲಕ್ಷ ಸದಸ್ಯರ ನೋಂದಣಿ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.
ರಾಜ್ಯದ ಸಹಕಾರ ಚಳವಳಿಯ ಬೆಳವಣಿಗೆಯಲ್ಲಿ ಯುವಜನರು, ಮಹಿಳೆಯರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಹಾಗೂ ಸಹಕಾರ ಸಂಸ್ಥೆಗಳಲ್ಲಿ ದೊರೆಯುವ ಪ್ರಯೋಜನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು ಎಂದು ಜಿ.ಟಿ.ದೇವೇಗೌಡ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್.ಟಿ.ಸೋಮಶೇಖರ್, ಕೆ.ಷಡಕ್ಷರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
‘ಇದು 72ನೇ ಸಹಕಾರ ಸಪ್ತಾಹವಾದ ಹಿನ್ನೆಲೆ, ರಾಜ್ಯದ ಸಹಕಾರ ಚಳವಳಿಯ ಬೆಳವಣಿಗೆಗೆ ಶ್ರಮಿಸಿದ 72 ಮಂದಿ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು’
-ಜಿ.ಟಿ.ದೇವೇಗೌಡ, ಶಾಸಕ
ರಾಷ್ಟ್ರದಲ್ಲಿ 8.5 ಲಕ್ಷ, ರಾಜ್ಯದಲ್ಲಿ 47ಸಾವಿರ ಸಹಕಾರ ಸಂಸ್ಥೆಗಳು ಕ್ರಿಯಾಶೀಲ: ರಾಷ್ಟ್ರದಲ್ಲಿ 8.5 ಲಕ್ಷ ಸಹಕಾರ ಸಂಸ್ಥೆಗಳಿದ್ದು, 31 ಕೋಟಿ ಜನ ಸದಸ್ಯರಿದ್ದಾರೆ. ಕರ್ನಾಟಕದಲ್ಲಿ 47 ಸಾವಿರ ಸಹಕಾರ ಸಂಸ್ಥೆಗಳು ಕ್ರಿಯಾಶೀಲ ಸೇವೆಯಲ್ಲಿ ತೊಡಗಿಸಿಕೊಂಡಿವೆ. 2 ಕೋಟಿ 72 ಲಕ್ಷ ಜನ ಸದಸ್ಯರಿದ್ದಾರೆ. ಹೈನುಗಾರಿಕೆ, ಕೃಷಿಪತ್ತಿನ ಸಹಕಾರ ವ್ಯವಸ್ಥೆ, ಪಟ್ಟಣ ಸಹಕಾರ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಅತ್ಯುತ್ತಮ ಸೇವೆ ಸಲ್ಲಿಸುತ್ತಿವೆ. ಸಹಕಾರಿ ವಲಯ ರಾಷ್ಟ್ರದ ಬಡತನ ನಿವಾರಣೆ, ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ರಾಷ್ಟ್ರದ ಜಿಡಿಪಿ ಹೆಚ್ಚಳಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಮಹಿಳಾ ಸ್ವಾವಲಂಬನೆಯಲ್ಲಿ ಮಹತ್ತರವಾದ ಪಾತ್ರವನ್ನು ಇಂದು ಸಹಕಾರ ವಲಯ ನಿರ್ವಹಿಸುತ್ತಿದೆ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.