ಬೆಂಗಳೂರಿನಾದ್ಯಂತ ಒಂದೇ ವರ್ಷದಲ್ಲಿ 400ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ : ಸೀಮಂತ್ ಕುಮಾರ್ ಸಿಂಗ್
ಬೆಂಗಳೂರು : ನಗರದಲ್ಲಿರುವ 25 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ಪರಿಶ್ರಮದಿಂದಾಗಿ ಒಂದೇ ವರ್ಷದಲ್ಲಿ 400 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವುದು ಹೊಸ ದಾಖಲೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಶನಿವಾರ ವೈಟ್‍ಫೀಲ್ಡ್‍ನ ಕುಂದಲಹಳ್ಳಿಯ ಬ್ರಿಗೇಡ್ ಟೆಕ್ ಗಾರ್ಡನ್‍ನಲ್ಲಿ ವೈಟ್ ಫೀಲ್ಡ್ ವಿಭಾಗದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಪೂರ್ವ ಸಂಚಾರ ವತಿಯಿಂದ ಹಮ್ಮಿಕೊಂಡಿದ್ದ ಮಾಸಿಕ ಜನ ಸಂಪರ್ಕ ಸಭೆ ಮತ್ತು ಸಂಚಾರ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಸರಕಾರ ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ವಿದೇಶಿಯರು, ಹೊರರಾಜ್ಯದವರು ಸೇರಿದಂತೆ ಸ್ಥಳೀಯರನ್ನು ಬಂಧಿಸಿ, ಇಷ್ಟೊಂದು ಬೃಹತ್ ಮೊತ್ತದ ಮಾದಕ ವಸ್ತು ವಶಪಡಿಸಿಕೊಂಡಿರುವುದು ದಾಖಲೆಯಾಗಿದೆ ಎಂದು ಅವರು ಹೇಳಿದರು.
ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಮಾತನಾಡಿ, ಸರಕಾರ ಮುಂದಿನ ತಿಂಗಳು ಪಾರ್ಕಿಂಗ್ ನೀತಿಯನ್ನು ಜಾರಿಗೆ ತರಲು ಉದ್ದೇಶಿಸಿದೆ. ಈ ಯೋಜನೆ ಜಾರಿಯಾದರೆ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು ತಪ್ಪಲಿದೆ. ಸಾರ್ವಜನಿಕರು ವಾಹನ ಪಾರ್ಕಿಂಗ್ ಗೆ ಜಾಗ ಕೊಟ್ಟರೆ ಅವರಿಗೆ ಟ್ಯಾಕ್ಸ್ ಫ್ರೀ ಆಗಲಿದೆ. ಆದ್ದರಿಂದ ಪಾರ್ಕಿಂಗ್ ಸಮಸ್ಯೆ ನಿವಾರಣೆಯಾಗಲಿದೆ ಎಂದರು.