ಹೊರವರ್ತುಲ ರಸ್ತೆ ಮರು ಅಭಿವೃದ್ಧಿಗೆ 450 ಕೋಟಿ ರೂ.ಅನುದಾನ : ಕೃಷ್ಣಬೈರೇಗೌಡ

Update: 2026-07-25 22:14 IST

ಬೆಂಗಳೂರು : ನಗರದ ಕೆ.ಆರ್.ಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‍ವರೆಗಿನ ಹೊರವರ್ತುಲ ರಸ್ತೆಯನ್ನು (ಒಆರ್‌ ಆರ್) ಆಮೂಲಾಗ್ರವಾಗಿ ಮೇಲ್ದರ್ಜೆಗೇರಿಸಲು, ಮೂಲಸೌಕರ್ಯ ಸುಧಾರಿಸಲು ಹಾಗೂ ವಾಹನ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರವು 450 ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಗೋಲ್ಡ್‍ಮನ್ ಸ್ಯಾಕ್ಸ್, ಹೆಲಿಯೊಸ್ ಬಿಸಿನೆಸ್ ಪಾರ್ಕ್, ಕಡುಬೀಸನಹಳ್ಳಿಯಲ್ಲಿ ಹೊರ ವರ್ತುಲ ರಸ್ತೆ ಕಂಪೆನಿಗಳ ಸಂಘ, ಐಟಿ ಪಾರ್ಕ್ ಮಾಲಕರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಸಾಮಾನ್ಯರೊಂದಿಗೆ ಸಮಾಲೋಚನಾ ಸಭೆ ನಡೆಸಿ ಸಚಿವರು ಮಾತನಾಡಿದರು.

ಸಭೆಯಲ್ಲಿ ಹೊರ ವರ್ತುಲ ರಸ್ತೆ ವ್ಯಾಪ್ತಿಯಲ್ಲಿರುವ ಪ್ರಮುಖ ಜಂಕ್ಷನ್‍ಗಳು, ಸರ್ವಿಸ್ ರಸ್ತೆಗಳು, ಪಾದಚಾರಿ ಮಾರ್ಗಗಳು, ಮೆಟ್ರೋ ಕಾಮಗಾರಿಗಳು, ಮಳೆನೀರು ಚರಂಡಿಗಳು, ಸಾರ್ವಜನಿಕ ಸಾರಿಗೆ ಸಂಪರ್ಕ, ವಾಹನ ನಿಲುಗಡೆ ವ್ಯವಸ್ಥೆ ಹಾಗೂ ನಾಗರಿಕರ ಸುರಕ್ಷತೆಯನ್ನು ಒಳಗೊಂಡ ಹಲವು ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಹೊರವರ್ತುಲ ರಸ್ತೆಯು ದೇಶದ ಆರ್ಥಿಕತೆಗೆ ಮತ್ತು ಐಟಿ ಕ್ಷೇತ್ರದ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾದ ಕಾರಿಡಾರ್ ಆಗಿದೆ. ಆದರೆ, 30-40 ವರ್ಷಗಳಿಂದ ಅನಧಿಕೃತ ಹಾಗೂ ನಿಯಮಬಾಹಿರವಾಗಿ ಲೇಔಟ್‍ಗಳು ಮತ್ತು ಕಟ್ಟಡಗಳು ನಿರ್ಮಾಣಗೊಂಡಿದ್ದರಿಂದ ಇಂದು ರಸ್ತೆ ಅಗಲ, ಒಳಚರಂಡಿ ಮತ್ತು ಪಾದಚಾರಿ ಮಾರ್ಗಗಳ ಅಭಾವ ಎದುರಾಗಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.

ಉದಾಹರಣೆಗೆ ಜಯನಗರದಲ್ಲಿ ಶೇ.23ರಷ್ಟು ಜಾಗ ರಸ್ತೆಗೆ ಲಭ್ಯವಿದ್ದರೆ, ಈ ಈಸ್ಟ್ ಝೋನ್‍ನಲ್ಲಿ ಶೇ.8ರಷ್ಟು ಮಾತ್ರ ಲಭ್ಯವಿದೆ. ಜೊತೆಗೆ ಅನಧಿಕೃತ ಕಟ್ಟಡಗಳಿಂದಾಗಿ ಪಾರ್ಕಿಂಗ್ ಜಾಗವಿಲ್ಲದೆ ವಾಹನಗಳು ರಸ್ತೆಯಲ್ಲೇ ನಿಲ್ಲುವುದರಿಂದ ಹಾಗೂ ನಿಯಮಬಾಹಿರವಾಗಿ ಕ್ರಾಸ್ ಆಗುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಸಮಸ್ಯೆಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು 450 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಕೇವಲ ರಸ್ತೆಯ ಮೇಲ್ಮೈ ಸರಿಪಡಿಸುವುದರಿಂದ ದಟ್ಟಣೆ ಕಡಿಮೆಯಾಗುವುದಿಲ್ಲ, ಬದಲಾಗಿ ಮೂಲಸೌಕರ್ಯ ಸರಿಪಡಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಜಂಕ್ಷನ್‍ಗಳಲ್ಲಿ ಉಂಟಾಗುತ್ತಿರುವ ಅಪಾರ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ವೈಜ್ಞಾನಿಕ ಮಾದರಿಯ ಬದಲಾವಣೆಗಳನ್ನು ತರಲಾಗುತ್ತಿದೆ. ಜಂಕ್ಷನ್‍ನ ಕೇಂದ್ರ ಭಾಗದಲ್ಲಿ ವಾಹನಗಳು ನೇರವಾಗಿ ಬಲಕ್ಕೆ ತಿರುಗುವುದನ್ನು ತಡೆದು, ವಾಹನ ಸಂಚಾರವನ್ನು ಸ್ವಲ್ಪ ಮುಂದೆ ಡೈವರ್ಟ್ ಮಾಡಲಾಗುವುದು. ಇದರಿಂದ ವಾಹನಗಳು ಆಪೋಸಿಟ್ ಸರ್ವಿಸ್ ರೋಡ್ ಮೂಲಕ ಅತ್ಯಂತ ಸುಗಮವಾಗಿ ‘ಫ್ರೀ ಲೆಫ್ಟ್' ಅಥವಾ ಯು-ಟರ್ನ್ ತೆಗೆದುಕೊಳ್ಳಲು ಅನುಕೂಲವಾಗಲಿದೆ. ಪ್ರತಿಯೊಂದು ಜಂಕ್ಷನ್‍ನ ವಿನ್ಯಾಸವೂ ಭಿನ್ನವಾಗಿದ್ದು, ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಪ್ರತ್ಯೇಕ ಡಿಸೈನ್ ಸಿದ್ಧಪಡಿಸಲಾಗಿದೆ ಎಂದು ಕೃಷ್ಣಬೈರೇಗೌಡ ವಿವರಿಸಿದರು.

ಉಪಯೋಗವಿಲ್ಲದೆ ಬಿದ್ದಿರುವ ಹಾಗೂ ಅನಧಿಕೃತ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವ ಜಂಕ್ಷನ್ ಸ್ಥಳಗಳನ್ನು ಸ್ವಚ್ಛಗೊಳಿಸಿ, ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು. ಅಲ್ಲಿ ಉತ್ತಮ ದೀಪಾಲಂಕಾರ ಹಾಗೂ ಪಾದಚಾರಿಗಳಿಗೆ ಬೇಕಾದ ಸಿವಿಕ್ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಪಾದಚಾರಿಗಳ ಹಿತದೃಷ್ಟಿಯಿಂದ ಪ್ರಸ್ತುತ ಇರುವ ಮೇಲ್ಮೈ ಆರ್‍ಸಿಸಿ ಡ್ರೈನ್‍ಗಳನ್ನು ತೆರವುಗೊಳಿಸಿ, ಪೈಪ್‍ಗಳ ಮೂಲಕ ಸಬ್-ಸರ್ಫೇಸ್ ಡ್ರೈನೇಜ್ ವ್ಯವಸ್ಥೆ ಮಾಡಲಾಗುವುದು ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಇನ್ನು ಸರ್ವಿಸ್ ರಸ್ತೆಗಳಲ್ಲಿ ಭೂಗತ ಯುಟಿಲಿಟಿ ಲೈನ್‍ಗಳಿರುವುದರಿಂದ ಅಲ್ಲಿ ಆಸ್ಫಾಲ್ಟ್ ರಸ್ತೆಗಳನ್ನೇ ಮರುನಿರ್ಮಾಣ ಮಾಡಲಾಗುವುದು. ರಸ್ತೆ ಅತಿಕ್ರಮಣ ತೆರವುಗೊಳಿಸಲು ಮೂಲ ಭೂಸ್ವಾಧೀನ ದಾಖಲೆಗಳ ಪ್ರಕಾರ ಸರ್ವೇ ನಡೆಸಿ ಪೂರ್ಣ ಪ್ರಮಾಣದ ರಸ್ತೆ ಅಗಲವನ್ನು ಹಿಂಪಡೆಯಲು ಸೂಚಿಸಲಾಗಿದೆ. ವಿಶೇಷವಾಗಿ, ರಸ್ತೆ ಗುಣಮಟ್ಟವನ್ನು ಕಾಯ್ದುಕೊಳ್ಳಲು ‘ಆ್ಯನುಟಿ ಪೇಮೆಂಟ್' ಮಾದರಿಯನ್ನು ಚಿಂತಿಸಲಾಗುತ್ತಿದೆ. ಇದರ ಪ್ರಕಾರ, ಗುತ್ತಿಗೆದಾರರೇ ಮುಂದಿನ 10 ರಿಂದ 12 ವರ್ಷಗಳ ಕಾಲ ರಸ್ತೆ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಹೊರಬೇಕಾಗುತ್ತದೆ. ರಸ್ತೆಯ ಮೇಲ್ಮೈ, ದೀಪಗಳು ಹಾಗೂ ಪಾದಚಾರಿ ಮಾರ್ಗದ ಗುಣಮಟ್ಟವನ್ನು ವರ್ಷಂಪ್ರತಿ ಪರಿಶೀಲಿಸಿ ಸರಕಾರವು ಅವರಿಗೆ ಕಂತುಗಳಲ್ಲಿ ಹಣ ಪಾವತಿಸಲಿದೆ ಎಂದು ಕೃಷ್ಣಬೈರೇಗೌಡ ವಿವರಿಸಿದರು.

ಈ ಸಂದರ್ಭದಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್.ರಮೇಶ್, ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಸೇರಿದಂತೆ ಬಿಎಂಆರ್‍ಸಿಎಲ್ ಮುಖ್ಯಸ್ಥರು ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News