ಪಟ್ಟಭದ್ರ ಹಿತಾಸಕ್ತಿಗಳು ಪ್ರಜಾಪ್ರಭುತ್ವದ ಸ್ತಂಭಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿವೆ : ಕಿಶೋರ್ ಕುಮಾರ್
ಬೆಂಗಳೂರು : ಪಟ್ಟಭದ್ರ ಹಿತಾಸಕ್ತಿಗಳು ಪ್ರಜಾಪ್ರಭುತ್ವದ ಎಲ್ಲ ಸ್ತಂಭಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಅವುಗಳ ಮೂಲಕ ಸಾಂವಿಧಾನಿಕ ಉದ್ದೇಶ, ಸಮಾಜದ ಸ್ವಾಸ್ಥ್ಯವನ್ನು ನಾಶ ಮಾಡುವ, ದಬ್ಬಾಳಿಕೆಯ ರಾಜಕಾರಣ ನೋಡುತ್ತಿದ್ದೇವೆ ಎಂದು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿ ನಟ ಕಿಶೋರ್ ಕುಮಾರ್ ತಿಳಿಸಿದರು.
ಶನಿವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಜ್ಯ ಚಲನಚಿತ್ರ ಅಕಾಡಮಿ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿರುವ ಭವ್ಯ ಮೆಟ್ಟಿಲುಗಳ ಮೇಲೆ ಅಳವಡಿಸಿದ್ದ ವರ್ಣ ರಂಜಿತ ವೇದಿಕೆಯಲ್ಲಿ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಿನಿಮಾಗಳ ಮೂಲಕ ಟಿವಿ ಹಾಗೂ ಸಮೂಹ ಮಾಧ್ಯಮಗಳಲ್ಲಿ ಇತಿಹಾಸವನ್ನು ತಿರುಚುವ, ಸುಳ್ಳು, ದ್ವೇಷ ಹರಡಿ, ಸಂವಿಧಾನದ ಮೂಲ ತತ್ವವಾದ ಭಾತೃತ್ವ ಮತ್ತು ಸಮಾನತೆಯನ್ನು ನಾಶ ಮಾಡುವಂತಹ ಒಡೆದು ಆಳುವ, ಮನೆ ಹಾಳು ರಾಜಕಾರಣವನ್ನು ನಾವು ಕಾಣುತ್ತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇಂದಿನ ಬದಲಾದ ರಾಜಕೀಯ, ಸಾಮಾಜಿಕ ಪರಿಸ್ಥಿತಿಯಲ್ಲಿ ನಮ್ಮ ಸರಿ ತಪ್ಪು, ಸತ್ಯ, ಅಸತ್ಯಗಳನ್ನು ಕಂಡುಕೊಳ್ಳಬೇಕಿದೆ. ಜನರ ದನಿಯಾಗದ ಕಲೆ ಸಂಪೂರ್ಣವಲ್ಲ, ಅರ್ಥಪೂರ್ಣವಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಈ ಚಲನಚಿತ್ರೋತ್ಸವವು ಹತ್ತು ಹಲವು ನಾಡು, ಸಂಸ್ಕೃತಿ, ಭಾಷೆಗಳಿಂದ ಬಂದು, ಎಲ್ಲರೂ ಸೇರಿ ಆಚರಿಸುತ್ತಿರುವ ಹಬ್ಬವಾಗಿದೆ ಎಂದು ಕಿಶೋರ್ ಕುಮಾರ್ ತಿಳಿಸಿದರು.
ಸರ್ವಜನಾಂಗದ ಶಾಂತಿಯ ತೋಟ ಈ ಶೀರ್ಷಿಕೆಯ ಅವಶ್ಯಕತೆ ಏನಿತ್ತು? ಸಂವಿಧಾನದ ಆಶಯಗಳಿಗೆ ಒದಗಿರುವ ತೊಡಕುಗಳೇನು? ಇದಕ್ಕೆ ಸಿನಿಮಾ, ಚಿತ್ರೋತ್ಸವವೇ ಯಾಕೆ ಬೇಕಿತ್ತು? ಇಷ್ಟು ವೈವಿಧ್ಯತೆಗಳ ನಡುವೆ ಸಕಲ ಜೀವಗಳು ಸೌಹಾರ್ದತೆ, ಪ್ರೀತಿಯಿಂದ ಬಾಳುವವರು ಎಷ್ಟು ಎಂದು ನೋಡಿದರೆ ಬೆರಣಿಕೆಯಷ್ಟು ಮಾತ್ರ. ಅದರಲ್ಲಿ ನಮ್ಮ ನಾಡು ಒಂದು. ಇದು ಇಡೀ ಜಗತ್ತಿಗೆ ಶಾಂತಿ, ಸಹಬಾಳ್ವೆಯ ಕನಸನ್ನು ಕಟ್ಟಿಕೊಡುತ್ತಿದೆ. ಆಚರಣೆ ಎಷ್ಟು ಮುಖ್ಯವೋ, ಅದರ ಮೂಲ ಮೌಲ್ಯವನ್ನು ಎತ್ತಿ ಹಿಡಿಯುವುದನ್ನು ಜನರಿಗೆ ತಿಳಿಸುವುದು ಅಷ್ಟೇ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸಂವಿಧಾನದ ಮೌಲ್ಯಗಳನ್ನು ಕಾಪಾಡಲು, ಜನರಲ್ಲಿ ಜಾಗೃತಿ ಮೂಡಿಸಲು ಕಲೆಯಿಂದ ಮಾತ್ರ ಸಾಧ್ಯ. ಸಿನಿಮಾದಂತ ಪ್ರಭಾವಶಾಲಿ ಮಾಧ್ಯಮಗಳಿಂದ ಮಾತ್ರ ಸಾಧ್ಯ. ಆದರೆ, ಬದಲಾದ ಜೀವನ ಶೈಲಿ ಹಾಗೂ ಮಾರುಕಟ್ಟೆಯ ಒತ್ತಡದಿಂದ ಸಿನಿಮಾ ಮಾಧ್ಯಮ ನಲಗುತ್ತಿದೆ ಎಂದು ಕಿಶೋರ್ ಕುಮಾರ್ ತಿಳಿಸಿದರು.
ಮಕ್ಕಳಲ್ಲಿ ಕಲಾ ಆಸಕ್ತಿ, ಕಲಾಭಿರುಚಿ ಹಾಗೂ ಸಿನಿಮಾಗಳನ್ನು ನೋಡುವ, ಸ್ವತಂತ್ರವಾಗಿ ಸಿನಿಮಾಗಳನ್ನು ಅರ್ಥೈಸುವ ಆಲೋಚನೆ ಬೆಳೆಸಲು ಪ್ರಾಥಮಿಕ ಶಾಲಾ ಪಠ್ಯಗಳಲ್ಲಿ ಸಿನಿಮಾವನ್ನು ಒಂದು ವಿಷಯವಾಗಿ ಸೇರಿಸಬೇಕು ಎಂದು ಅವರು ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಿಝ್ವಾನ್ ಅರ್ಶದ್ ಮಾತನಾಡಿ, ಸಿನಿಮಾ ಎಂದರೆ ಸಮಾಜವನ್ನು ಒಗ್ಗೂಡಿಸುವ ಮಾಧ್ಯಮವಾಗಿತ್ತು. ಇವತ್ತು ರಾಜಕೀಯ ಉದ್ದೇಶದಿಂದ ಹಣ ನೀಡಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕೆಲವು ರಾಜಕೀಯ ನಾಯಕರ ತೇಜೋವಧೆ ಮಾಡಲು ಸಿನಿಮಾಗಳನ್ನು ಮಾಡಲಾಗುತ್ತಿದೆ. ಇತಿಹಾಸವನ್ನು ಚಿರುಚಲಾಗುತ್ತಿದೆ. ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯ ದ್ವೇಷ ಸಾಧಿಸುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.
ಚುನಾವಣೆ ಬರುವ ಆರು ತಿಂಗಳ ಮುಂಚೆ ರಾಜಕೀಯ ಪ್ರೇರಿತ ಸಿನಿಮಾಗಳು ಬರಲು ಆರಂಭವಾಗುತ್ತದೆ. ಕಲಾವಿದರಿಗೆ ಜಾತಿ, ಧರ್ಮ ಇಲ್ಲ. ಸಿನಿಮಾಗಳಿಗೂ ಧರ್ಮ ಇಲ್ಲ. ಅವರು ಜಾತಿ, ಧರ್ಮದ ಆಧಾರದಲ್ಲಿ ಸಿನಿಮಾಗಳನ್ನು ಮಾಡಿದರೆ ಸಮಾಜಕ್ಕೆ ಏನು ಸಂದೇಶ ನೀಡಿದಂತಾಗುತ್ತದೆ ಎಂದು ರಿಝ್ವಾನ್ ಅರ್ಶದ್ ಪ್ರಶ್ನಿಸಿದರು.