×
Ad

ಕಂದಾಯ ಇಲಾಖೆ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ : ಕೃಷ್ಣ ಬೈರೇಗೌಡ

Update: 2025-11-29 18:43 IST

ಬೆಂಗಳೂರು : ಪೋಡಿ ದುರಸ್ಥಿ, ಫೌತಿ ಖಾತೆ, ಭೂ ಸುರಕ್ಷಾ ಅಭಿಯಾನ ಸೇರಿದಂತೆ ಕಳೆದ ಎರಡೂವರೆ ವರ್ಷದಲ್ಲಿ ಕಂದಾಯ ಇಲಾಖೆಯ ಹತ್ತಾರು ಪ್ರಮುಖ ಸೇವೆಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಶನಿವಾರ ವಿಕಾಸಸೌಧದಲ್ಲಿ ನಡೆದ ಎಲ್ಲ ಜಿಲ್ಲಾಧಿಕಾರಿಗಳ ಮಾಸಿಕ ಸಭೆಯ ನಡುವೆಯೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಅರ್ಜಿಯನ್ನು ಪಡೆಯದೆ ರೈತರ ಮನೆ ಮನೆಗೆ ಹೋಗಿ ಅಭಿಯಾನ ಮಾದರಿಯಲ್ಲಿ ಪೋಡಿ ಮಾಡಿಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

2018 ರಿಂದ 2023ರ ನಡುವೆ ಕೇವಲ 8,500 ಪ್ರಕರಣಗಳಲ್ಲಿ ಮಾತ್ರ ಪೋಡಿ ಮಾಡಲಾಗಿತ್ತು. ಆದರೆ, ನಾವು ಇದೇ ವರ್ಷದ ಜನವರಿ ತಿಂಗಳಲ್ಲಿ ‘ನನ್ನ ಭೂಮಿ’ ಅಭಿಯಾನ ಆರಂಭಿಸಿ ಕೇವಲ ಒಂದೇ ವರ್ಷದಲ್ಲಿ 1,49,600 ಜಮೀನನ್ನು ದರ್ಖಾಸ್ತು ಪೋಡಿ ಅಳೆತೆಗೆ ತೆಗೆದುಕೊಂಡಿದ್ದೇವೆ ಎಂದು ಅವರು ನುಡಿದರು.

ಹಾಸನ ಜಿಲ್ಲೆಯಲ್ಲೂ 17 ಸಾವಿರ ಪ್ರಕರಣಗಳನ್ನು ಅಳೆತೆಗೆ ತೆಗೆದುಕೊಂಡಿದ್ದು, ಇದನ್ನು ಸಾಂಕೇತಿಕವಾಗಿ ಜನರಿಗೆ ಸಮರ್ಪಣೆ ಮಾಡುವ ಸಲುವಾಗಿ ಡಿ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ‘ಸಮರ್ಪಣಾ ದಿನ’ ಆಚರಿಸಲು ಕಾರ್ಯಕ್ರಮ ನಿಗದಿಪಡಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಅದೇ ರೀತಿ, ಖಾಸಗಿ ಜಮೀನು ಮಾಲಕರಿಗೂ ನಾವೇ ಸ್ವಯಂ ಪ್ರೇರಿತರಾಗಿ ‘ಪೋಡಿ ಮುಕ್ತ ಗ್ರಾಮ’ ಅಭಿಯಾನದ ಅಡಿ ಪೋಡಿ ಮಾಡಿಕೊಡುತ್ತಿದ್ದೇವೆ. ಈ ಹಿಂದೆ ತಿಂಗಳಿಗೆ ಸರಾಸರಿ 90 ಸಾವಿರ ಸರ್ವೇ ಮಾಡಲಾಗುತ್ತಿತ್ತು. ಈಗ ಸರಾಸರಿ 1.34 ಲಕ್ಷ ಸರ್ವೇ ಮಾಡಿಕೊಡುತ್ತಿದ್ದೇವೆ. ಇದರಿಂದ ಬಡ ಜನರು ಹಾಗೂ ರೈತರಿಗೆ ಸಾಕಷ್ಟು ಅನುಕೂಲ ಆಗುತ್ತಿದೆ ಎಂದು ಅವರು ಹೇಳಿದರು.

ತಹಶೀಲ್ದಾರ್ ನ್ಯಾಯಾಲಯ ಪ್ರಗತಿ:

ನಾನು ಕಂದಾಯ ಇಲಾಖೆ ಜವಾಬ್ದಾರಿ ಸ್ವೀಕಾರ ಮಾಡುವ ಮುನ್ನ ತಹಶೀಲ್ದಾರ್ ನ್ಯಾಯಾಲಯದಲ್ಲಿ 10,774 ಪ್ರಕರಣಗಳು ಅವಧಿ ಮೀರಿಯೂ ನ್ಯಾಯ ತೀರ್ಮಾನವಾಗದೆ ಬಾಕಿ ಇದ್ದವು. ಆದರೆ, ಇದೀಗ ಆ ಸಂಖ್ಯೆಯನ್ನು 526ಕ್ಕೆ ಇಳಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಎಸಿ (ಉಪ ವಿಭಾಗಾಧಿಕಾರಿ) ನ್ಯಾಯಾಲಯದಲ್ಲೂ 6 ತಿಂಗಳಲ್ಲಿ ಪ್ರಕರಣ ಇತ್ಯರ್ಥಗೊಳಿಸಬೇಕು ಎಂಬ ನಿಯಮ ಇದ್ದರೂ 1 ವರ್ಷಕ್ಕಿಂತ ಹೆಚ್ಚು ಅವಧಿ ಮೀರಿದ 59,339 ಪ್ರಕರಣಗಳು ಬಾಕಿ ಇದ್ದವು. ವಿಶೇಷ ಎಸಿ ಗಳನ್ನು ನೇಮಕ ಮಾಡುವ ಮೂಲಕ ಆ ಸಂಖ್ಯೆಯನ್ನೂ ಇದೀಗ 9954ಕ್ಕೆ ಇಳಿಸಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡರು.

ಫೌತಿ ಖಾತೆ ಅಭಿಯಾನ:

ರಾಜ್ಯದಲ್ಲಿ ಸುಮಾರು 40 ಲಕ್ಷ ಜಮೀನುಗಳು ಮೃತರ ಹೆಸರಲ್ಲಿ ಇದ್ದದ್ದನ್ನು ಗುರುತಿಸಿ ಅದನ್ನು ವಾರಸುದಾರರಿಗೆ ಮಾಡಿಕೊಡಲು ಫೌತಿ ಖಾತೆ ಅಭಿಯಾನ ಆರಂಭಿಸಿದ್ದೇವೆ. ಈವರೆಗೆ 3.20 ಲಕ್ಷ ಜಮೀನು ಫೌತಿ ಖಾತೆ ಯಶಸ್ವಿಯಾಗಿದೆ. ಪ್ರತಿಯೊಬ್ಬ ಗ್ರಾಮ ಆಡಳಿತ ಅಧಿಕಾರಿಗಳಿಗೂ ತಿಂಗಳಿಗೆ ಕಡ್ಡಾಯ 100 ಫೌತಿ ಖಾತೆ ಮಾಡಲು ಗುರಿ ನಿಗದಿಪಡಿಸಿದ್ದೇವೆ. ಅಲ್ಲದೆ, ಅವರಿಗೆ ಪ್ರೋತ್ಸಾಹ ಧನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಭೂ ಸುರಕ್ಷಾ ಅಭಿಯಾನ:

ಭೂ ಸುರಕ್ಷಾ ಅಭಿಯಾನದ ಅಡಿಯಲ್ಲಿ ಈವರೆಗೆ 53 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇನ್ನೂ 40 ಕೋಟಿ ಪುಟಗಳ ಸ್ಕ್ಯಾನ್ ಮಾಡುವ ಕೆಲಸ ಬಾಕಿ ಇದ್ದು, ಪ್ರತಿ ದಿನ ಸುಮಾರು 17.50 ಲಕ್ಷ ಪುಟ ಸ್ಕ್ಯಾನ್ ಮಾಡಲಾಗುತ್ತಿದೆ. ಫೆಬ್ರವರಿ ಕೊನೆಯ ಒಳಗೆ ಇದನ್ನು ಮುಗಿಸಬೇಕು ಎಂದು ಗಡುವು ನೀಡಲಾಗಿದೆ ಎಂದು ಅವರು ಹೇಳಿದರು.

ಆಡಳಿತದಲ್ಲಿ ಪಾರದರ್ಶಕತೆ ತರಬೇಕು, ಸಚಿವರಿಂದ ಗ್ರಾಮ ಆಡಳಿತ ಅಧಿಕಾರಿವರೆಗೂ ಎಲ್ಲರೂ ಇ-ಕಚೇರಿ ಮೂಲಕವೆ ಕೆಲಸ ಮಾಡಬೇಕು. ಕಾಗದ ವ್ಯವಹಾರಕ್ಕೆ ಇತಿಶ್ರೀ ಹಾಡಬೇಕು ಎಂಬ ಕಾರಣಕ್ಕೆ ಸಂಪುಟದ ಅನುಮತಿಯೊಂದಿಗೆ 5 ಸಾವಿರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‍ಟಾಪ್ ನೀಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರಿಗೆ (ಆರ್‌ಐ) ಲ್ಯಾಪ್ಟಾಪ್ ನೀಡುವ ಶೇ.100 ರಷ್ಟು ಇಲಾಖೆಯ ಎಲ್ಲಾ ಕೆಲಸಗಳನ್ನು ಆನ್‍ಲೈನ್ ಅಡಿಯಲ್ಲಿ ತರಲಾಗುವುದು ಎಂದು ಅವರು ಹೇಳಿದರು.

ಸರ್ವೇ ಕಾರ್ಯಕ್ಕೆ ಸಹಕಾರಿಯಾಗಲು 600 ರೋವರ್ ಖರೀದಿ ಮಾಡಲಾಗಿದೆ. ಇನ್ನೂ 1000 ರೋವರ್‍ಗಳನ್ನು ಖರೀದಿಸಲಾಗುವುದು. ಇಲಾಖೆಯನ್ನು ಸಂಪೂರ್ಣ ಡಿಜಿಟಲೈಶೇಷನ್ ಮಾಡಬೇಕು ಎಂದು ಪಣತೊಡಲಾಗಿದೆ. ಇದಲ್ಲದೆ, ಇಲಾಖೆಯಲ್ಲಿ ಹಿಂದಿನಿಂದಲೂ ಬಾಕಿ ಇದ್ದ ಸಮಸ್ಯೆಗಳನ್ನು ಹುಡುಕಿ ಪರಿಹಾರ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೌನಿಶ್ ಮುದ್ಗಿಲ್, ಕಂದಾಯ ಆಯುಕ್ತ ಮುಲ್ಲೈ ಮುಗಿಲನ್ ಹಾಗೂ ಭೂ ದಾಖಲೆಗಳು ಮತ್ತು ಸರ್ವೆ ಇಲಾಖೆಯ ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News