ಮಸ್ಕಿ | ದಲಿತ ಮಹಿಳೆಯ ಶವ ಸಂಸ್ಕಾರಕ್ಕೆ ಮೇಲ್ಜಾತಿಯವರಿಂದ ಅಡ್ಡಿ; ಆರೋಪ
ರಾಯಚೂರು : ಇಲ್ಲಿನ ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಆನಂದಗಲ್ ಗ್ರಾಮದಲ್ಲಿ ದಲಿತ ಸಮುದಾಯದ ಮಹಿಳೆಯೊಬ್ಬರ ಶವ ಸಂಸ್ಕಾರಕ್ಕೆ ಮೇಲ್ಜಾತಿಯವರು ಅಡ್ಡಿಪಡಿಸಿದ್ದಾರೆ ಎನ್ನಲಾದ ಘಟನೆ ನಡೆದಿದ್ದು, ಪರಿಣಾಮವಾಗಿ ಸ್ಥಳದಲ್ಲಿ ಮಾತಿನ ಚಕಮಕಿ ಉಂಟಾದ ಘಟನೆ ನಡೆದಿದೆ.
ಆನಂದಗಲ್ ಗ್ರಾಮದ ದಲಿತ ಕೇರಿಯ ರಂಗಮ್ಮ ಯಲ್ಲಪ್ಪ ಎಂಬವರು ರವಿವಾರ ಮೃತಪಟ್ಟಿದ್ದರು. ಸೋಮವಾರ ಶವ ಸಂಸ್ಕಾರ ಮಾಡಲು ಮಹಿಳೆಯ ಸಂಬಂಧಿಕರು, ಗ್ರಾಮಸ್ಥರು ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಸಿದ್ಧತೆ ನಡೆಸಿದಾಗ ರುದ್ರಭೂಮಿಯ ಪಕ್ಕದ ಜಮೀನಿನ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ವ್ಯಕ್ತಿ, ಆತನ ಕುಟುಂಬಸ್ಥರು ಅಡ್ಡಿಪಡಿಸಿದ್ದು, ʼಸ್ಮಶಾನ ಭೂಮಿ ನಮ್ಮದು, ಅಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ಕಲ್ಪಿಸುವುದಿಲ್ಲʼ ಎಂದು ಅಡ್ಡಿಪಡಿಸಿದಾಗ ವಿವಾದ ಉಂಟಾಗಿದೆ ಎನ್ನಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಎಚ್ಚರಿಸಿ ಅಂತ್ಯಸಂಸ್ಕಾರಕ್ಕೆ ಅವಕಾಶ ಕಲ್ಪಿಸಿದರು ಎಂದು ಹೇಳಲಾಗಿದೆ.
ಈ ಬಗ್ಗೆ ಗ್ರಾಮದ ನಿವಾಸಿ ಸಿದ್ದು ಎಂಬವರು ಮಾತನಾಡಿ, "ಬಹಳ ಹಿಂದೆಯಿಂದ ಅದೇ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಸಾರ್ವಜನಿಕ ರುದ್ರಭೂಮಿಯಲ್ಲಿ ಎಲ್ಲರಿಗೂ ಶವ ಸಂಸ್ಕಾರ ಮಾಡಲು, ಅಡ್ಡಿಪಡಿಸದೆ ಎಸ್‌ಸಿ ಸಮುದಾಯದವರು ಮೃತಪಟ್ಟರೆ ಮಾತ್ರ ಅಡ್ಡಿಪಡಿಸುತ್ತಾರೆ" ಎಂದು ಆರೋಪಿಸಿದರು.