×
Ad

ಡಾ.ಪರಮೇಶ್ವರ್ ಮೇಲಿನ ದುರುದ್ದೇಶಪೂರಿತ ಈ.ಡಿ. ತನಿಖೆ ಕೈಬಿಡಬೇಕು : ಮಾವಳ್ಳಿ ಶಂಕರ್

Update: 2025-05-24 22:14 IST

ಬೆಂಗಳೂರು : ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಮೇಲಿನ ಕೇಂದ್ರ ಸರಕಾರದ ದುರುದ್ದೇಶಪೂರಿತ ಜಾರಿ ನಿರ್ದೇಶನಾಲಯ (ಈ.ಡಿ) ತನಿಖೆಯನ್ನು ಕೂಡಲೇ ಕೈಬಿಡಬೇಕು ಎಂದು ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆಗ್ರಹಿಸಿದ್ದಾರೆ.

ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜಾರಿ ನಿರ್ದೇಶನಾಲಯವನ್ನು ತನ್ನ ಗುರಾಣಿಯನ್ನಾಗಿ ಬಳಸುತ್ತಿದೆ. ತಮ್ಮ ಸರಕಾರದ ವಿರುದ್ಧ ವಿರೋಧ ಪಕ್ಷದ ನಾಯಕರು ಯಾರೇ ಮಾತನಾಡಿದರೂ, ಅವರ ವಿರುದ್ಧ ಈಡಿಯನ್ನು ಬಳಸಿ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತನ್ನದೇ ಪಕ್ಷದ ಯಾವುದೇ ರಾಜಕಾರಣಿ ಎಷ್ಟೇ ಭ್ರಷ್ಟಾಚಾರ ಮಾಡಿದರೂ, ಅವರನ್ನು ಮುಟ್ಟುವ ಗೋಜಲಿಗೆ ಹೋಗುವುದಿಲ್ಲ. ಇಲ್ಲಿಯವರೆಗೆ ತನ್ನ ಹಾಗೂ ಮಿತ್ರಪಕ್ಷದ ರಾಜಕಾರಣಿಗಳ ಮೇಲೆ ಯಾವ ಈಡಿಯೂ ದಾಳಿಯೂ ಮಾಡಿಲ್ಲ. ಕೇಂದ್ರ ಸರಕಾರದ ಈ ದುರ್ನೀತಿಯನ್ನು ದಸಂಸ ಖಂಡಿಸುತ್ತದೆ. ಪರಮೇಶ್ವರ್ ಮೇಲಿನ ದುರುದ್ದೇಶಪೂರಿತ ತನಿಖೆ ಕೈಬಿಡದಿದ್ದರೇ, ರಾಜ್ಯಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ ಎಂದು ಮಾವಳ್ಳಿ ಶಂಕರ್ ಎಚ್ಚರಿಕೆ ನೀಡಿದರು.

ರವಿಕುಮಾರ್ ಬಾಗಿ ಮಾತನಾಡಿ, ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪ್ರಿಯಾಂಕ್ ಖರ್ಗೆ ಪ್ರಧಾನಿ ಮೋದಿಗೆ ಪ್ರಶ್ನಿಸುತ್ತಾರೆ. ಪ್ರಶ್ನೆ ಮಾಡುವುದಿದ್ದರೆ ದಿಲ್ಲಿಯಲ್ಲಿರುವ ಅವರ ತಂದೆ ಮೂಲಕ ಕೇಳಲಿ ಎಂಬ ಅಪ್ರಜಾತಾಂತ್ರಿಕ ಮಾತುಗಳನ್ನಾಡಿದ್ದರು. ಅಲ್ಲದೇ ಮೋದಿ ಆನೆ ಇದ್ದ ಹಾಗೆ, ಅವರ ಬಗ್ಗೆ ಮಾತನಾಡುವವರು ನಾಯಿ ಇದ್ದ ಹಾಗೆ ಎಂದು ಅಸಂವಿಧಾನಿಕ ಪದ ಬಳಸಿ ಅವಮಾನಿಸಿ ತೇಜೋವಧೆ ಮಾಡಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಭಜನಾ ಮಂಡಳಿಯ ಸದಸ್ಯರಾಗಿರುವ ಛಲವಾದಿ ನಾರಾಯಣಸ್ವಾಮಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದಕ್ಕೋಸ್ಕರ ಇತರೆ ದಲಿತ ನಾಯಕರನ್ನು ವಿನಾಕಾರಣ ನಿಂದಿಸುವುದು ಅಕ್ಷಮ್ಯ ನಡವಳಿಕೆಯಾಗಿದೆ. ಅವರು ಕೂಡಲೇ ಪ್ರಿಯಾಂಕ್ ಖರ್ಗೆಗೆ ಕ್ಷಮೆಯಾಚಿಸಬೇಕು. ಹೀನಾಯ ರಾಜಕಾರಣದ ನಡವಳಿಕೆಯನ್ನು ಬಿಟ್ಟು, ಮುತ್ಸದ್ಧಿತನವನ್ನು ಮೈಗೂಡಿಸಿಕೊಂಡು ಅಂಬೇಡ್ಕರ್ ತೋರಿದ ನ್ಯಾಯ ಮಾರ್ಗದಲ್ಲಿ ಮುನ್ನಡೆಯಲಿ ಎಂದು ರವಿಕುಮಾರ್ ಭಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರುದ್ರ ಪುನೀತ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News