ಕೇಂದ್ರ ಸರಕಾರ ಈ.ಡಿ. ದಾಳಿ ಮೂಲಕ ದಲಿತ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ : ಎಂ.ಲಕ್ಷ್ಮಣ್
ಮೈಸೂರು : ಬಿಜೆಪಿಗೆ ದಲಿತರನ್ನು ಕಂಡರೆ ಆಗಲ್ಲ. ಈ ಕಾರಣದಿಂದಲೇ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ವ್ಯಾಪ್ತಿ ಮೀರಿ ಈ.ಡಿ. ದಾಳಿ ನಡೆಸಿದೆ. ಕೇಂದ್ರ ಸರಕಾರ ದಲಿತ ನಾಯಕರನ್ನು ಟಾರ್ಗೆಟ್ ಮಾಡಿದ್ದು, ಕಾಂಗ್ರೆಸ್ ಪ್ರಭಾವಿ ನಾಯಕರನ್ನು ಈ.ಡಿ. ದಾಳಿ ಮೂಲಕ ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪ್ರಭಾವಿ ನಾಯಕರ ಮೇಲೆ ಈ.ಡಿ. ದಾಳಿ ಮೂಲಕ ಹೆದರಿಸುವ ಕೆಲಸ ಮಾಡುತ್ತಿದೆ. ಡಾ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಯಲ್ಲಿ ಏನಾದರೂ ಭ್ರಷ್ಟಾಚಾರ ನಡೆದರೆ ಸಂಬಂಧಿಸಿದ ಶಿಕ್ಷಣ ಇಲಾಖೆ ಮೇಲೆ ತನಿಖೆ ನಡೆಸಬೇಕು. ಆದರೆ ಈ.ಡಿ.ಗೆ ಈ ರೀತಿಯ ದಾಳಿ ಮಾಡಲು ಅಧಿಕಾರ ಇಲ್ಲ ಎಂದರು.
ಪರಮೇಶ್ವರ್ ಅಲ್ಲದೇ ಇನ್ನೂ ಏಳೆಂಟು ದಲಿತ ಮುಖಂಡರ ಪಟ್ಟಿ ಮಾಡಿದ್ದು, ಇವರನ್ನು ಟಾರ್ಗೆಟ್ ಮಾಡಿ ದಾಳಿ ಮಾಡುವ ಸಾಧ್ಯತೆ ಇದೆ. ಜಾತಿ ಗಣತಿ ವರದಿ ಬಂದರೆ ದಲಿತರು ತಮ್ಮ ಪರವಾಗಿ ಇರುವುದಿಲ್ಲ ಎಂಬುದೇ ಇದಕ್ಕೆ ಕಾರಣ. ಆದರೆ ನಾವೆಲ್ಲ ಪರಮೇಶ್ವರ್ ಪರ ಇದ್ದೇವೆಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮಾಧ್ಯಮ ವಕ್ತಾರ ಕೆ.ಮಹೇಶ್ ಉಪಸ್ಥಿತರಿದ್ದರು.