×
Ad

ಮುಂಗಾರು ಅಧಿವೇಶನ | ಆಸ್ತಿ ನೋಂದಣಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ

Update: 2025-08-13 21:38 IST

ಬೆಂಗಳೂರು, ಆ.13: ಆಸ್ತಿ ನೋಂದಣಿಗಳ ವಿಧಾನಗಳನ್ನು ಮತ್ತಷ್ಟು ಸರಳೀಕರಣಗೊಳಿಸುವ ಹಾಗೂ ಬಹಳಷ್ಟು ಸಂದರ್ಭದಲ್ಲಿ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವ ಮಹತ್ವದ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ಬುಧವಾರ ಶಾಸಕ ರಚನೆ ಕಲಾಪದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧೇಯಕ ಕುರಿತು ಮಾತನಾಡಿ, ನೋಂದಣಿ ಪ್ರಕ್ರಿಯೆಯಲ್ಲಿ ಕಾಲಕ್ಕೆ ತಕ್ಕಂತೆ ಹಂತ-ಹಂತವಾಗಿ ಬದಲಾವಣೆಯನ್ನು ನಿರಂತರವಾಗಿ ತರಲಾಗುತ್ತಿದೆ. ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಸುಧಾರಣೆ ಮಾಡಲಾಗುತ್ತಿದೆ ಎಂದರು.

ಈ ವಿಧೇಯಕದ ಮೂಲ ಉದ್ದೇಶವೇ ನೋಂದಣಿ ಸರಳೀಕರಣ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ತಾಂತ್ರಿಕತೆ ಬಳಸಿಕೊಂಡು ಅಧಿಕಾರಿಗಳ ಮಧ್ಯಪ್ರವೇಶವನ್ನು ಸಕ್ರೀಯವಾಗಿ ಕಡಿಮೆ ಮಾಡುವುದಾಗಿದೆ. ನೂತನ ತಿದ್ದುಪಡಿಯ ಮೂಲಕ ಸೆಕ್ಷನ್ 9ರ ಅಡಿಯಲ್ಲಿ ಕಂಪ್ಯೂಟರ್ ಡಿಜಿಟಲ್ ಸಹಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಉದಾಹರಣೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಒಬ್ಬರಿಗೆ ನಿವೇಶನ ಮಂಜೂರು ಮಾಡಿದರೆ ರಿಜಿಸ್ಟ್ರಾರ್ ಅಧಿಕಾರಿ ಇಲ್ಲದೆಯೂ ಅದನ್ನು ಆಟೊಮ್ಯಾಟಿಕ್ ಆಗಿ ನೋಂದಣಿ ಮಾಡುವಂತಹ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ ಎಂದು ಉಲ್ಲೇಖಿಸಿದರು.

ತಹಶೀಲ್ದಾರ್ 94ಸಿ 94ಸಿಸಿಯಲ್ಲಿ ಹಕ್ಕುಪತ್ರ ಕಡ್ಡಾಯ ನೋಂದಣಿ ಮಾಡುವ ಅವಕಾಶ ನೀಡಿದ್ದೇವೆ. ನಮೂನೆ 53, 57ರ ಅಡಿಯಲ್ಲಿ ಮಂಜೂರಿದಾರರಿಗೆ ತಹಶೀಲ್ದಾರ್ ಬಗರ್ ಹುಕುಂ ಭೂಮಿ ನೋಂದಣಿ ಮಾಡಿಕೊಡಲು ಸಬ್ ರಿಜಿಸ್ಟ್ರಾರ್ ಅಗತ್ಯ ಇಲ್ಲ. ಮಂಜೂರಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ತಹಶೀಲ್ದಾರ್ ಡಿಜಿಟಲ್ ಆಗಿ ಅಪ್ಲೋಡ್ ಮಾಡಿದರೆ ಆಟೊಮ್ಯಾಟಿಕ್ ಆಗಿ ನೋಂದಾಣಿ ಆಗಲಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಆನಂತರ, ಬಿಜೆಪಿ ಸದಸ್ಯರಾದ ಸುರೇಶ್ ಕುಮಾರ್, ಅರವಿಂದ ಬೆಲ್ಲದ್, ಚನ್ನಬಸಪ್ಪ, ಕಾಂಗ್ರೆಸ್ಸಿನ ಕೆ.ಎಂ.ಶಿವಲಿಂಗಗೌಡ, ತನ್ವೀರ್ ಸೇಠ್ ಮುಂತಾದವರು ಹಲವು ಸಲಹೆ ಸೂಚನೆಗಳನ್ನು ನೀಡಿ, ವಿಧೇಯಕವನ್ನು ಸ್ವಾಗತಿಸಿದರು. ಆನಂತರ, ಧ್ವನಿ ಮತದ ಮೂಲಕ ವಿಧೇಯಕ ಅಂಗೀಕಾರವಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಪ್ರಕಟಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News