×
Ad

ಪ್ರೊ.ಬಿ.ಕೃಷ್ಣಪ್ಪಗೆ ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ದಸಂಸ ಆಗ್ರಹ

Update: 2025-05-09 00:32 IST

ಬೆಂಗಳೂರು : ದಲಿತ ಸಂಘರ್ಷ ಸಮಿತಿಯ ಸ್ಥಾಪಕ ಪ್ರೊ.ಕೃಷ್ಣಪ್ಪನವರ ಜನ್ಮದಿನವಾದ ಜೂನ್ 9ರಂದು ಸರಕಾರಿ ರಜೆ ಘೋಷಿಸಬೇಕು ಮತ್ತು ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಸಮಿತಿಯು ಒಕ್ಕೊರಲಿನಿಂದ ಆಗ್ರಹಿಸಿದೆ.

ಗುರುವಾರ ಇಲ್ಲಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ನಡೆದ ಜನಕ್ರಾಂತಿ ಸಮಾವೇಶದಲ್ಲಿ ದಲಿತರ ಆಶಾಕಿರಣವಾಗಿದ್ದ ಪ್ರೊ.ಕೃಷ್ಣಪ್ಪ ಅವರನ್ನು ಸರಕಾರ ಕಡೆಗಣಿಸಬಾರದು ಎಂದು ದಲಿತ ಮುಖಂಡರು ಸರಕಾರವನ್ನು ಒತ್ತಾಯಿಸಿದರು.

ಈ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಎಂ.ಗುರುಮೂರ್ತಿ, ರಾಜ್ಯ ಸರಕಾರವು ಎಸ್‍ಸಿ, ಎಸ್‍ಟಿ ಸಮುದಾಯದ ಅನುದಾನಗಳ ದುರ್ಬಳಕೆಯನ್ನು ನಿಲ್ಲಿಸಬೇಕು. ಈಗಾಗಲೇ ಸುಮಾರು 42 ಸಾವಿರ ಕೋಟಿ ರೂ.ಗಳಷ್ಟು ದಲಿತರ ಹಣ ಗ್ಯಾರಂಟಿಗಳಿಗೆ ಬಳಕೆಯಾಗಿದ್ದು, ಇದನ್ನು ತಡೆಯಬೇಕು ಎಂದರು.

ದಲಿತರಿಗೆ ಬಗರ್ ಹುಕುಂ ಸಾಗುವಳಿ ಚೀಟಿ ನೀಡಬೇಕು. ಸರಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಕುಟುಂಬಗಳಿಗೆ ಕಾಯಂ ಹಕ್ಕುಪತ್ರ ವಿತರಿಸಬೇಕು. ವಿಧವಾ ವೇತನ, ದೇವದಾಸಿ ವೇತನ, ವಿಕಲಚೇತನ, ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿಯನ್ನು 3 ಸಾವಿರ ರೂ.ಗಳಿಗೆ ಏರಿಸಬೇಕು ಎಂದು ಎಂ.ಗುರುಮೂರ್ತಿ ಒತ್ತಾಯಿಸಿದರು.

ಸಮಾವೇಶದಲ್ಲಿ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

‘ಹಿಂದೂ ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಮನುಧರ್ಮವನ್ನು ಮರುಸ್ಥಾಪಿಸುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ದಲಿತರು ಎಚ್ಚರಿಕೆ ವಹಿಸಬೇಕು. ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ನಮ್ಮ ಉಸಿರು. ಅದನ್ನು ಕಾಪಾಡಿಕೊಂಡು ಸಾಗಬೇಕು’

-ಡಾ.ಎಲ್.ಹನುಮಂತಯ್ಯ, ರಾಜ್ಯಸಭೆ ಮಾಜಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News