×
Ad

ಭಾರತೀಯ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬಲು ರಾಜ್ಯಾದ್ಯಂತ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

Update: 2025-05-09 21:30 IST

ಬೆಂಗಳೂರು : ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೈನಿಕರ ಪರವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು.

ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸೂಚನೆಯಂತೆ ಶುಕ್ರವಾರ ರಾಜ್ಯದ ಎಲ್ಲ ಮಸೀದಿಗಳಲ್ಲಿ ಏಕಕಾಲದಲ್ಲಿ ಖತೀಬ್, ಇಮಾಮ್‌ಗಳು ದೇಶಕ್ಕಾಗಿ ಹೋರಾಟ ನಡೆಸುತ್ತಿರುವ ಭಾರತೀಯ ಸೈನಿಕರಿಗೆ ದೇವರು ಇನ್ನಷ್ಟು ಬಲ ನೀಡಲಿ ಮತ್ತು ದೇಶದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ ಎಂದು ಪ್ರಾರ್ಥಿಸಿದರು.

ಬೆಂಗಳೂರು ಶೇಷಾದ್ರಿಪುರಂ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಪಾಲ್ಗೊಂಡರು. ಅದೇ ರೀತಿ, ಮೈಸೂರು, ಬೆಳಗಾವಿ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕಲಬುರಗಿ, ಬೀದರ್ ಸೇರಿದಂತೆ ಆಯಾ ಕ್ಷೇತ್ರದ ಮಸೀದಿಗಳಲ್ಲಿ ಮುಸ್ಲಿಮ್ ಸಮುದಾಯದ ನಾಯಕರು, ಚಿಂತಕರು, ಸಾಮಾಜಿಕ ಕಾರ್ಯಕರ್ತರು, ಜುಮಾ ನಮಾಝಿನ ಬಳಿಕ ಭಾರತೀಯ ಸೈನಿಕರಿಗಾಗಿ ವಿಶೇಷ ದುವಾ ನೆರವೇರಿಸಲಾಯಿತು.

ಈ ವೇಳೆ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಮಾತನಾಡಿ, ವಕ್ಫ್ ಬೋರ್ಡ್ ವ್ಯಾಪ್ತಿಯ ಮಸೀದಿಗಳು ಸೇರಿದಂತೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ದೇಶದ ಹೆಮ್ಮಯ ಸೈನಿಕರ ಶ್ರೇಯಸ್ಸಿಗಾಗಿ ಹಾಗೂ ಅವರಿಗೆ ಶಕ್ತಿ ತುಂಬಲು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News