ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಸೈಬರ್ ವಂಚಕರಿಗೆ ಅನುಕೂಲವಾಗಬಹುದು : ಬಿ.ದಯಾನಂದ್ ಎಚ್ಚರಿಕೆ
PC : freepik.com/ ಪೊಲೀಸ್ ಆಯುಕ್ತ ಬಿ.ದಯಾನಂದ್
ಬೆಂಗಳೂರು : ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹಿನ್ನೆಲೆಯಲ್ಲಿ ಸೈಬರ್ ವಂಚಕರ ಕುರಿತು ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಸೋಮವಾರ ಮಾಧ್ಯಮ ಹೇಳಿಕೆ ನೀಡಿರುವ ಅವರು, ಉಭಯ ದೇಶಗಳ ನಡುವಿನ ಪರಿಸ್ಥಿತಿಯ ಕುರಿತು ಜನಸಾಮಾನ್ಯರ ಕುತೂಹಲವನ್ನು ಬಳಸಿಕೊಳ್ಳುವ ಸೈಬರ್ ವಂಚಕರು ಸುಳ್ಳು ಸುದ್ದಿ, ಫಿಶಿಂಗ್, ನಕಲಿ ಲಿಂಕ್‍ಗಳ ಮೂಲಕ ವಂಚಿಸುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ.
ನಕಲಿ ಲಿಂಕ್‍ಗಳ ಮೂಲಕ ಸೇನೆಯಲ್ಲಿ ಕೆಲಸದ ಅಪ್ಲಿಕೇಶನ್ ಹೆಸರಿನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸೈಬರ್ ವಂಚಕರು ಕಳುವು ಮಾಡಬಹುದು. ತುರ್ತಾಗಿ ಆರ್ಮಿ ನೇಮಕಾತಿ ಮತ್ತಿತರ ಕುರಿತು ಅಪರಿಚಿತರಿಂದ ಮೇಲ್‍ಗಳನ್ನು ಸ್ವೀಕರಿಸಿದರೆ ಅವುಗಳನ್ನು ತೆರೆಯದಿರಿ. ಅವುಗಳ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕದಿಯುವ ಸಾಧ್ಯತೆಗಳಿವೆ ಎಂದು ಬಿ.ದಯಾನಂದ್ ಹೇಳಿದ್ದಾರೆ.
ಸಾರ್ವಜನಿಕರು ವಾಟ್ಸಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ವೀಕರಿಸುವ ಅಪರಿಚಿತರ ಸಂದೇಶಗಳನ್ನು ತೆರೆಯದಿರಿ. ನಿಮ್ಮ ಪರಿಚಿತರಿಂದಲೇ ಅನುಮಾನಾಸ್ಪದ ಫೈಲ್‍ಗಳನ್ನು ಸ್ವೀಕರಿಸಿದರೂ ಸಹ ತೆರೆಯದಿರಿ ಹಾಗೂ ಇತರರೊಂದಿಗೆ ಹಂಚಿಕೊಳ್ಳದಿರಿ, ಬದಲಿಗೆ ಅವುಗಳನ್ನು ಡಿಲೀಟ್ ಮಾಡುವುದು ಸೂಕ್ತ ಎಂದು ಬಿ.ದಯಾನಂದ್ ತಿಳಿಸಿದ್ದಾರೆ.
ಅಪರಿಚಿತ, ಅನುಮಾನಾಸ್ಪದ ಸಂದೇಶಗಳ ಬಗ್ಗೆ ಯಾವಾಗಲೂ ಎಚ್ಚರದಿಂದಿರಿ. ಅಂಥಹ ವಾಟ್ಸಪ್ ಗ್ರೂಪ್‍ಗಳ ಕುರಿತು ಎಕ್ಸಿಟ್, ರಿಪೋರ್ಟ್ ಮತ್ತು ಡಿಲಿಟ್ ಸೂತ್ರ ಅನುಸರಿಸಿ. ವಾಟ್ಸಪ್ ಸೆಕ್ಯೂರಿಟಿ ಸೆಟ್ಟಿಂಗ್ಸ್ ಬಳಸಿ, ಮೀಡಿಯಾ (ಫೊಟೋ, ವಿಡಿಯೋ, ಆಡಿಯೋ ಹಾಗೂ ಡಾಕ್ಯುಮೆಂಟ್) ಆಟೋ ಡೌನ್‍ಲೋಡ್ ಆಫ್ ಮಾಡಿ. ವಾಟ್ಸಪ್ ಸೇರಿದಂತೆ ನಿಮ್ಮ ಎಲ್ಲಾ ಖಾತೆಗಳಿಗೆ 2 ಫ್ಯಾಕ್ಟರ್ ಅಥೆಂಟಿಕೇಶನ್ ಸೆಟ್ಟಿಂಗ್ಸ್ ಚಾಲ್ತಿಯಲ್ಲಿರಿಸುವ ಮೂಲಕ ಹೆಚ್ಚುವರಿ ಸೆಕ್ಯೂರಿಟಿ ಖಚಿತಪಡಿಸಿಕೊಳ್ಳಿ ಎಂದು ಬಿ.ದಯಾನಂದ್ ಸಲಹೆ ನೀಡಿದ್ದಾರೆ.
ಅಪರಿಚಿತರ ಮೂಲಕ ಸ್ವೀಕರಿಸುವ ಮೇಲ್‍ಗಳನ್ನು ತೆರೆಯದಿರಿ, ಮುಖ್ಯವಾಗಿ ತುರ್ತು ವಿಚಾರ, ಇಂಡೋ-ಪಾಕ್ ಯುದ್ಧ ಸನ್ನಿವೇಶದ ಕುರಿತು ಎಂಬ ತಲೆಬರಹವಿರುವ ಮೇಲ್‍ಗಳನ್ನು ತೆರೆಯಲೇಬೇಡಿ. ಅನುಮಾನಾಸ್ಪದ ಲಿಂಕ್‍ಗಳ ಕುರಿತು ಎಚ್ಚರವಿರಲಿ, ವಂಚಕರು ಅಧಿಕೃತ ಸಂಸ್ಥೆಗಳ ಹೆಸರಿನಲ್ಲಿ ಮೇಲ್ ಸಂದೇಶಗಳನ್ನು ರವಾನಿಸಬಹುದು ಎಂದು ಬಿ.ದಯಾನಂದ್ ತಿಳಿಸಿದ್ದಾರೆ.
ಸಾರ್ವಜನಿಕರು ಸೈಬರ್ ದಾಳಿಗೊಳಗಾದರೆ ಆತಂಕಪಡಬೇಡಿ, ಸೈಬರ್ ಕ್ರೈಂ ಸಹಾಯವಾಣಿ (1930)ಯನ್ನು ಸಂಪರ್ಕಿಸಿ, ಅಥವಾ cybercrime.gov.inನಲ್ಲಿ ರಿಪೋರ್ಟ್ ಮಾಡಿ. ನಿಮ್ಮ ಎಚ್ಚರಿಕೆಯಿಂದ ಭಾರತವನ್ನು ಸುರಕ್ಷಿತವಾಗಿರಿಸಲು ಸಹಾಯವಾಗಲಿದೆ. ಸಾರ್ವಜನಿಕರು ಸುರಕ್ಷಿತವಾಗಿ ಎಚ್ಚರವಾಗಿರುವ ಮೂಲಕ ಈ ಕಠಿಣ ಸಂದರ್ಭದಲ್ಲಿ ಸೈಬರ್ ವಂಚಕರನ್ನು ನಾವು ಒಟ್ಟಾಗಿ ಎದುರಿಸಬಹುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸಂದೇಶ ನೀಡಿದ್ದಾರೆ.