ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ನ್ಯಾ. ಮೈಕೆಲ್ ಕುನ್ಹಾ ವರದಿ ರದ್ದು ಕೋರಿ ಸಲ್ಲಿಸಿದ್ದ ಡಿಎನ್ಎ ಅರ್ಜಿ ವಿಚಾರಣೆಗೆ ಹೈಕೋರ್ಟ್ ನಿಂದ ದಿನ ನಿಗದಿ
ಕಾಲ್ತುಳಿತ ಸಂಭವಿಸಿರುವ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಶಿ ಬಿದ್ದಿರುವ ಪಾದರಕ್ಷೆಗಳು
ಬೆಂಗಳೂರು: ಆರ್ ಸಿಬಿ ಚೊಚ್ಚಲ ಐಪಿಎಲ್ ಕಪ್ ಗೆದ್ದ ಸಂಭ್ರಮಾಚರಣೆ ಸಂದರ್ಭ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾನವನ್ನಪ್ಪಿರುವ ಪ್ರಕರಣದಲ್ಲಿ ನ್ಯಾ. ಮೈಕೆಲ್ ಕುನ್ಹಾ ವರದಿ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಡಿಎನ್ಎ ಎಂಟರ್ ಟೈನ್ಮೆಂಟ್ ನೆಟ್ವರ್ಕ್ ಮನವಿ ಮಾಡಿದೆ.
ಇಂದು ಹೈಕೋರ್ಟ್ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ, ನ್ಯಾಯಮೂರ್ತಿ.ಎಸ್.ಜಿ.ಪಂಡಿತ್ ಅವರಿದ್ದ ಪೀಠಕ್ಕೆ ಅರ್ಜಿದಾರ ಪರ ವಕೀಲರು, ಸರಕಾರ ತನ್ನ ಮುಖ ಉಳಿಸಿಕೊಳ್ಳಲು ಆಯೋಗ ರಚಿಸಿದಂತಿದೆ. ನ್ಯಾಯಮೂರ್ತಿ ಕುನ್ಹಾ ಆಯೋಗದ ವರದಿ ಏಕಪಕ್ಷೀಯವಾಗಿದೆ. ಸಾಕ್ಷಿಗಳ ಪಾಟೀ ಸವಾಲಿಗೆ ಅವಕಾಶ ನೀಡಲಾಗಿಲ್ಲ. ಅರ್ಜಿದಾರರ ವರ್ಚಸ್ಸಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಪೂರ್ವಯೋಜಿತವಾಗಿಯೇ ವರದಿ ಬಹಿರಂಗ ಮಾಡಲಾಗಿದೆ. ಹೀಗಾಗಿ ವರದಿಯನ್ನೇ ರದ್ದುಪಡಿಸಲು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಇದರ ವಿಚಾರಣೆಯನ್ನು ನ್ಯಾಯಾಲಯವು ಜು.28ಕ್ಕೆ ನಿಗದಿಪಡಿಸಿದೆ.