ಬದುಕಿನ ಪರೀಕ್ಷೆ ಎದುರಿಸಲು ಸಾಹಿತ್ಯವೇ ಸಾಧನ: ಜಯಂತ ಕಾಯ್ಕಿಣಿ
ಬೆಂಗಳೂರು: ಹೊಸತಲೆಮಾರಿನ ವಿದ್ಯಾರ್ಥಿಗಳು ಬದುಕಿನ ಸವಾಲುಗಳಿಗೆ ಧೃತಿಗೆಡದೆ ಸಮರ್ಥವಾಗಿ ಎದುರಿಸಲು ಸಾಹಿತ್ಯವೇ ಪ್ರಮುಖ ಸಾಧನ. ಹಾಗಾಗಿ ಇಂದಿನ ತಲೆಮಾರಿನ ಯುವಜನರು ಸಾಹಿತ್ಯಾಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಕರೆ ನೀಡಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರ, ಶೇಷಾದ್ರಿಪುರಂ ಕಾಲೇಜು, ಕನ್ನಡ ಸಂಘ, ಕನ್ನಡ ವಿಭಾಗದ ಸಹಯೋಗದಲ್ಲಿ ಇಂದು ಆಯೋಜಿಸಿದ್ದ ‘ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಡಿ ವ್ಯಾಸರಾಯ ಬಲ್ಲಾಳರ ‘ಬಂಡಾಯ' ಕೃತಿ ಕುರಿತು ಅವರು ಮಾತನಾಡುತ್ತಿದ್ದರು.
ವ್ಯಾಸರಾಯ ಬಲ್ಲಾಳರು ಕನ್ನಡ ಸಾಹಿತ್ಯ ಕಂಡ ಅಪರೂಪದ ಬರಹಗಾರ. ಮೃದುದೋರಣೆಯ, ಭಾವ ಪರವಶತೆಯ ಶೈಲಿಯ ಕಾದಂಬರಿಗಳಿಂದ ಗುರುತಿಸಿಕೊಂಡಿದ್ದ ಬಲ್ಲಾಳರು ಕ್ರಾಂತಿಕಾರಕ ಮನಸ್ಥಿತಿಯ ಕಡೆಗೆ ಹೊರಳಿದ್ದು ಅವರ ಬಂಡಾಯ ಕಾದಂಬರಿಯ ವಿಶೇಷವಾಗಿದೆ.
ವ್ಯಾಸರಾಯ ಬಲ್ಲಾಳರ ‘ಬಂಡಾಯ’ಕೃತಿಯ ಅಂತರಂಗದ ಆಶಯವೂ ಸಹ ಬದುಕಿನ ನಾನಾ ಸ್ತರಗಳ ವ್ಯವಸ್ಥೆಯೊಂದಿಗೆ ಮನುಷ್ಯರು ಮುಖಾಮುಖಿಯಾಗುವುದೇ ಆಗಿದೆ ಎಂದು ಅಭಿಪ್ರಾಯಿಸಿದರು.
ಈ ಕಾದಂಬರಿ ಮೇಲ್ನೋಟಕ್ಕೆ ಕಾರ್ಮಿಕರು ಮತ್ತು ಬಂಡವಾಳ ಶಾಹಿಗಳ ನಡುವಿನ ಸಂಘರ್ಷದ ಕಥಾ ವಸ್ತು ಹೊಂದಿದ್ದರೂ ಅಲ್ಲಿನ ಪಾತ್ರಗಳು ಬದುಕಿನ ವಿವಿಧ ಹಂತಗಳಲ್ಲಿ ಪರಸ್ಪರ ಬಂಡಾಯ ಏಳುವುದನ್ನು ಕಾಣಬಹುದಾಗಿದೆ. ಮನುಷ್ಯನೇ ಮನುಷ್ಯನನ್ನು ಬೇಟೆಯಾಡುವುದು ಬದುಕಿನ ವಿಪರ್ಯಾಸಗಳಲ್ಲಿ ಒಂದು. ಮನುಷ್ಯನಷ್ಟು ಕ್ರೂರಿ ಬೇರೆ ಇಲ್ಲ ಎನ್ನುವುದೇ ಸಾರ್ವಕಾಲಿಕ ಸತ್ಯ. ಇಲ್ಲಿ ಈ ಬಂಡಾಯ, ಮಾಲಿಕ-ಕಾರ್ಮಿಕರ ನಡುವಿನದಾದರೂ ವ್ಯಕ್ತಿಗತವಾದ ಬಂಡಾಯವನ್ನೂ ಸಹ ಇಲ್ಲಿನ ಪಾತ್ರಗಳು ಪ್ರತಿನಿಧಿಸುತ್ತವೆ. ತಲೆಮಾರಿನಿಂದ ತಲೆಮಾರಿಗೆ, ವ್ಯಕ್ತಿಯಿಂದ ವ್ಯಕ್ತಿಗೆ, ಕುಟುಂಬದ ಒಳಗೆ ಮತ್ತು ಹೊರಗೆ ಹೀಗೆ ಬಂಡಾಯ ಎಲ್ಲ ಸ್ಥರಗಳಲ್ಲಿಯೂ ಒಂದಲ್ಲಾ ಒಂದು ಹಂತದಲ್ಲಿ ಸ್ಫೋಟಗೊಳ್ಳುತ್ತದೆ. ಇದು ಪ್ರತಿಯೊಂದು ಸಮಾಜದಲ್ಲೂ ಅನಿವಾರ್ಯ ಮತ್ತು ಸತ್ಯ ಎಂದು ಜಯಂತ ಕಾಯ್ಕಿಣಿ ವಿಶ್ಲೇಷಿಸಿದರು.
ಇಲ್ಲಿ, ಹೆಣ್ಣು ಹಣೆಯ ಮೇಲಿಡುವ ಕುಂಕುಮದ ಬೊಟ್ಟನ್ನು ಸಹ ಕ್ರಾಂತಿಕಾರಕ ಕೆಂಪು ಚಿಹ್ನೆ ಎಂದು ಚಿತ್ರಿಸಿದ ವ್ಯಾಸರಾಯ ಬಲ್ಲಾಳರ ಚಿಂತನಾಶೈಲಿ ಅಚ್ಚರಿ ಹುಟ್ಟಿಸುವಷ್ಟು ಶಕ್ತವಾಗಿದೆ ಎಂದ ಅವರು, ಯಾವುದೇ ಸಮಾಜ ನಮ್ಮ ಅಂತರಂಗದ ಭಾವನಾತ್ಮಕತೆಯ ಭಾಗವಾಗಿರಬೇಕು, ಸಾಹಿತ್ಯ ಅದಕ್ಕೆ ಪೂರಕವಾಗಿರಬೇಕು ಎಂದರು.
ಸಾಹಿತ್ಯದ ಈ ಶಕ್ತಿ ಮತ್ತು ಅದರ ಸೌಂದರ್ಯವನ್ನ ವಿದ್ಯಾರ್ಥಿಗಳು ಅನುಭವಿಸಬೇಕೆಂದರೆ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಓದನ್ನು ರೂಢಿಸಿಕೊಳ್ಳಬೇಕು ಎಂದು ಅವರು ಕಿವಿ ಮಾತು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಮಾತನಾಡಿ, ಪ್ರತೀ ವಿದ್ಯಾರ್ಥಿಯ ಹಸ್ತಕ್ಕೆ ಪುಸ್ತಕವಿರಬೇಕು. ಪುಸ್ತಕ ಮಕ್ಕಳ ಮಸ್ತಕದಲ್ಲಿ ತುಂಬುವಂತಾಗಬೇಕು. ಆಗ ಮಾತ್ರ ಕನ್ನಡ ಸಾಹಿತ್ಯ ಮತ್ತು ಕನ್ನಡ ಪುಸ್ತಕೋದ್ಯಮವು ಬೆಳೆಯುತ್ತದೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರ ತನ್ನ ಯೋಜನೆಗಳ ಮೂಲಕ ಪುಸ್ತಕಾಭಿರುಚಿಯನ್ನು ಬೆಳೆಸಲು ಹೊರಟಿದೆ. ಆ ದಿಸೆಯಲ್ಲಿ ಮನೆಗೊಂದು ಗ್ರಂಥಾಲಯ ಮತ್ತು ಅಂಗಳದಲ್ಲಿ ತಿಂಗಳ ಪುಸ್ತಕ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಶೇಷಾದ್ರಿಪುರಂ ಕಾಲೇಜಿನ ಗೌರವ ಕಾರ್ಯದರ್ಶಿ ನಾಡೋಜ ಡಾ.ವೂಡೆ ಪಿ. ಕೃಷ್ಣ ಮಾತನಾಡಿ, ತಮ್ಮ ಕಾಲೇಜು ಇಂತಹ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸದಾ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಜಯಂತ ಕಾಯ್ಕಿಣಿ ಹಾಗೂ ವೂಡೇ ಪಿ. ಕೃಷ್ಣರನ್ನು ಸನ್ಮಾನಿಸಲಾಯಿತು. ವ್ಯಾಸರಾಯ ಬಲ್ಲಾಳರ ಪುತ್ರಿ ಅಂಜಲಿ ಬಲ್ಲಾಳ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್, ಶೇಷಾದ್ರಿಪುರಂ ಕಾಲೇಜು ಪ್ರಾಂಶುಪಾಲ ಮೇಜರ್ ಡಾ. ಆನಂದಪ್ಪ ಐ., ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಎಚ್.ಎಂ.ಗೀತಾ, ಕನ್ನಡ ಸಂಘದ ಸಂಚಾಲಕಿ ಎಂ.ಎನ್. ಅರ್ಚನಾ ತೇಜಸ್ವಿ ಉಪಸ್ಥಿತರಿದ್ದರು.