×
Ad

ಅಧಿವೇಶನ | ಮನಮೋಹನ್ ಸಿಂಗ್, ಸುಕ್ರಿ ಬೊಮ್ಮಗೌಡ, ನಾ.ಡಿಸೋಜಾ ಸೇರಿ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ

Update: 2025-03-03 17:41 IST

ಬೆಂಗಳೂರು : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಮಾಜಿ ಸಂಸದ ಎಂ.ಶ್ರೀನಿವಾಸ್, ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ, ಲೇಖಕ ನಾ.ಡಿಸೋಜಾ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನ ಮಂಡದಲ್ಲಿ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೋಮವಾರ ರಾಜ್ಯಪಾಲರ ಭಾಷಣದ ಬಳಿಕ ಸದನ ಸಮಾವೇಶಗೊಳ್ಳುತ್ತಿದ್ದಂತೆ ಸಂತಾಪ ಸೂಚನೆ ನಿರ್ಣಯ ಮಂಡಿಸಿ ಮಾಜಿ ಶಾಸಕಿ ಜಯವಾಣಿ ಮಂಚೆಗೌಡ, ಚಿತ್ರ ನಿರ್ಮಾಪಕ ಶ್ಯಾಮ್ ಬೆನಗಲ್ ಸೇರಿದಂತೆ ಇತ್ತೀಚಿಗೆ ಅಗಲಿದ ಗಣ್ಯರನ್ನು ವಿಷಾದದಿಂದ ಸದನಕ್ಕೆ ತಿಳಿಸಿದರು.

ಆ ಬಳಿಕ ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವ ಹಾಗೂ ಪ್ರಧಾನಿ ಹುದ್ದೆಯೂ ಸೇರಿದಂತೆ ಅವರಿಗೆ ಅಧಿಕಾರ ಸಿಕ್ಕಾಗ ಆ ಹುದ್ದೆಗಳಿಗೆ ಗೌರವ ತಂದುಕೊಟ್ಟರು. ಆರ್ಥಿಕವಾಗಿ ದೂರದೃಷ್ಟಿ ಹೊಂದಿದ್ದ ಅಪರೂಪದ ಅರ್ಥಶಾಸ್ತ್ರಜ್ಞ ಎಂದು ಸ್ಮರಿಸಿದರು.

ಮನಮೋಹನ್ ಸಿಂಗ್ ಅವರ ನಿಧನ ದೇಶಕ್ಕೆ ದೊಡ್ಡ ನಷ್ಟ. ದೇಶದ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಸೂತ್ರ ನೀಡಿದರು. ದೇಶದ ಪರಿವರ್ತನೆಗೆ ಕಾರಣರಾದರು. ರಾಜಕಾರಣದಲ್ಲಿ ಮೃಧುಭಾಷಿ ಮತ್ತು ಮಿತಭಾಷಿ ಎಂಬುದನ್ನು ತೋರಿಸಿಕೊಟ್ಟರು. ಅತ್ಯಂತ ಪ್ರಾಮಾಣಿಕ ಪ್ರಧಾನಿ. ಮಹಾನ್ ರಾಜನೀತಿಜ್ಞ ಎಂದು ಸಿದ್ದರಾಮಯ್ಯ ಬಣ್ಣಿಸಿದರು.

ವಿಪಕ್ಷದ ನಾಯಕ ಆರ್.ಅಶೋಕ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸದಸ್ಯರು ಅಗಲಿದ ಗಣ್ಯರ ಗುಣಗಾನ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು. ಅನಂತರ ಮೃತರ ಗೌರವಾರ್ಥ ಸದನದ ಎಲ್ಲ ಸದಸ್ಯರು ಎದ್ದು ನಿಂತು ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕೂತೇ ಮಾತನಾಡಿ: ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಸಿಎಂ ಸಿದ್ದರಾಮಯ್ಯ ಮಾತು ಆರಂಭಿಸಿದ ವೇಳೆ ಸ್ಪೀಕರ್ ಸೇರಿದಂತೆ ವಿಪಕ್ಷ ಸದಸ್ಯರು, ಸಿಎಂಗೆ ಕಾಲುನೋವಿನ ಹಿನ್ನೆಲೆಯಲ್ಲಿ ‘ಕೂತೇ ಮಾತನಾಡಿ’ ಎಂದು ಸಲಹೆ ನೀಡಿದರು. ಆದರೆ, ಸಿಎಂ ಸಿದ್ದರಾಮಯ್ಯ ‘ಪರವಾಗಿಲ್ಲ, ನಾನು ಹತ್ತು ನಿಮಿಷ ನಿಂತುಕೊಂಡೇ ಮಾತನಾಡುತ್ತೇನೆ’ ಎಂದು ಸುಮಾರು 20 ನಿಮಿಷ ಕಾಲ ಮಾತನಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News