ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ: ಮಾಹಿತಿ ನೀಡಲು ಇನ್ಫೋಸಿಸ್ ನಾರಾಯಣಮೂರ್ತಿ ದಂಪತಿ ನಕಾರ
ನಾವು ಹಿಂದುಳಿದ ಯಾವುದೇ ಜಾತಿಗೆ ಸೇರಿಲ್ಲ: ಸ್ವಯಂ ದೃಢೀಕರಣ ಪತ್ರದಲ್ಲಿ ಉಲ್ಲೇಖ
ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡಲು ಇನ್ಫೋಸಿಸ್ ಮುಖ್ಯಸ್ಥ ಡಾ.ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ ಸುಧಾಮೂರ್ತಿ ನಿರಾಕರಿಸಿದ್ದಾರೆ.
ಸಮೀಕ್ಷೆಯಲ್ಲಿ ವೈಯಕ್ತಿಕ ಕಾರಣಗಳಿಂದ ಮಾಹಿತಿ ನೀಡಲು ನಿರಾಕರಿಸುತ್ತಿದ್ದೇನೆ ಎಂದು ಹಿಂದುಳಿದ ವರ್ಗಗಳ ಆಯೋಗಕ್ಕೆ ಸ್ವಯಂ ದೃಢೀಕರಣ ಪತ್ರ ಬರೆದಿದ್ದಾರೆ.
ರಾಜ್ಯ ಸರಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವುದು ಅವರ ಇಚ್ಛೆಗೆ ಬಿಟ್ಟಿದ್ದಾಗಿದೆ ಎಂಬುದಾಗಿ ಆಯೋಗವು ಈಗಾಗಲೇ ಸ್ಪಷ್ಟನೆ ನೀಡಿದೆ. ಭಾಗವಹಿಸಲು ನಿರಾಕರಿಸುವವರು ಮಾಹಿತಿ ನೀಡಲು ನಿರಾಕರಣೆ ಸ್ವಯಂ ದೃಢೀಕರಣ ಪತ್ರ ನೀಡುವಂತೆ ಸೂಚಿಸಿದೆ.
ಪತ್ರದಲ್ಲಿ ಏನಿದೆ?
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಕೆಲವು ವೈಯಕ್ತಿಕ ಕಾರಣಗಳಿಂದ ಮಾಹಿತಿ ನೀಡಲು ನಿರಾಕರಿಸುತ್ತೇವೆ. ನಾವು ಹಿಂದುಳಿದ ಯಾವುದೇ ಜಾತಿಗೆ ಸೇರಿಲ್ಲ. ಹೀಗಾಗಿ ಈ ಸಮೀಕ್ಷೆ ಸರಕಾರಕ್ಕೆ ಉಪಯೋಗವಿಲ್ಲ. ಆದ್ದರಿಂದ ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ವಯಂ ದೃಢೀಕರಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.