ಹಾರಾಟದ ವೇಳೆ ತಾಂತ್ರಿಕ ದೋಷ | ಬೆಂಗಳೂರಲ್ಲೇ ಲ್ಯಾಂಡ್ ಆದ ‘ಏರ್ ಇಂಡಿಯಾ ವಿಮಾನ’
Update: 2025-08-04 20:12 IST
ಏರ್ ಇಂಡಿಯಾ | PC : @airindia
ಬೆಂಗಳೂರು : ಹಾರಾಟದ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಕೋಲ್ಕತ್ತಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ವಾಪಸ್ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು, ಸುರಕ್ಷಿತವಾಗಿ ಲ್ಯಾಂಡ್ ಆಗಿರುವ ಘಟನೆ ವರದಿಯಾಗಿದೆ.
ಆ.3ರ ರವಿವಾರ ರಾತ್ರಿ 7.16ಕ್ಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಯಾನ ಸಂಸ್ಥೆಯ XI2718 ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋಲ್ಕತ್ತಾಗೆ ಟೇಕ್ ಆಫ್ ಆಗಿತ್ತು. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣದಿಂದ ವಿಮಾನ ಪೈಲೆಟ್‍ಗಳು ವಾಪಸ್ ಬೆಂಗಳೂರಿಗೆ ತಂದು ಲ್ಯಾಂಡ್ ಮಾಡಿದ್ದಾರೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ ತಿಳಿಸಿದೆ.
ತೊಂದರೆಗೊಳಗಾದ ವಿಮಾನ ಪ್ರಯಾಣಿಕರಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ ಕ್ಷಮೆ ಕೋರಿದ್ದು, ತಕ್ಷಣವೇ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದೆ.