×
Ad

ಬೆಂಗಳೂರಿನಲ್ಲಿ ಮೂರು ಹೊಸ ಪೊಲೀಸ್ ವಿಭಾಗ ರಚನೆ: ಡಿಸಿಪಿಗಳ ನೇಮಕ

Update: 2025-07-16 21:01 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ರಾಜಧಾನಿಯಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅಪರಾಧ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆ, ಅಪರಾಧ ನಿಯಂತ್ರಣ ಹಾಗೂ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆ ಬಲಪಡಿಸಲು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಹೊಸದಾಗಿ ಮೂರು ಪೊಲೀಸ್ ವಿಭಾಗಗಳನ್ನು ತೆರೆಯಲಾಗಿದ್ದು, ಇವುಗಳಿಗೆ ಡಿಸಿಪಿಗಳನ್ನು ನೇಮಕ ಮಾಡಿ ಸರಕಾರ ಆದೇಶಿಸಿದೆ.

ಈ ಮೂಲಕ ಈ ಹಿಂದೆಯಿದ್ದ 8 ಡಿಸಿಪಿ ಉಪ ವಿಭಾಗಗಳ ಜೊತೆಗೆ, ಹೆಚ್ಚುವರಿ 3 ವಿಭಾಗಗಳು ಸೇರ್ಪಡೆಯಾಗಿದ್ದು, ಒಟ್ಟಾರೆ 11 ಪೊಲೀಸ್ ವಿಭಾಗಗಳು ಕಾರ್ಯ ನಿರ್ವಹಿಸಲಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಎಲೆಕ್ಟ್ರಾನಿಕ್ ಸಿಟಿ, ನೈಋತ್ಯ ಹಾಗೂ ವಾಯುವ್ಯ ಹೊಸ ಡಿಸಿಪಿ ಉಪ ವಿಭಾಗಗಳನ್ನು ರಚನೆ ಮಾಡಲಾಗಿದೆ. ಆಗ್ನೇಯ, ಪಶ್ಚಿಮ ಹಾಗೂ ಉತ್ತರ ವಿಭಾಗಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಲ ಪೊಲೀಸ್ ಠಾಣೆಗಳನ್ನು ಹೊಸ ಉಪ ವಿಭಾಗಗಳ ಪರಿಧಿಗೆ ತರಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ.

ಉತ್ತರ ವಿಭಾಗದ ವ್ಯಾಪ್ತಿಯಲ್ಲಿದ್ದ ಪೀಣ್ಯ, ರಾಜಗೋಪಾಲನಗರ, ಬಾಗಲಗುಂಟೆ, ಬ್ಯಾಡರಹಳ್ಳಿ, ಸೋಲದೇವನಹಳ್ಳಿ ಹಾಗೂ ಗಂಗಮ್ಮನಗುಡಿ ಪೊಲೀಸ್ ಠಾಣೆಗಳು ಇನ್ನು ಮುಂದೆ ವಾಯುವ್ಯ ವಿಭಾಗಕ್ಕೆ ಬರಲಿವೆ. ಈ ಹೊಸ ವಿಭಾಗದ ಡಿಸಿಪಿಯಾಗಿ ಐಪಿಎಸ್ ಅಧಿಕಾರಿ ಡಿ.ಎಲ್.ಚೇತನ್ ಕಾರ್ಯ ನಿರ್ವಹಿಸಲಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ವಿಭಾಗಕ್ಕೆ ಮೊದಲ ಡಿಸಿಪಿಯಾಗಿ ಎಂ.ನಾರಾಯಣ್ ಅವರನ್ನು ಸರಕಾರ ನಿಯೋಜಿಸಿದೆ. ಎಲೆಕ್ಟ್ರಾನಿಕ್ ಸಿಟಿ, ಹುಳಿಮಾವು, ಬೇಗೂರು, ಪರಪ್ಪನ ಅಗ್ರಹಾರ, ಬಂಡೆಪಾಳ್ಯ ಹಾಗೂ ನೂತನವಾಗಿ ನಗರಕ್ಕೆ ಸೇರ್ಪಡೆಯಾಗಿರುವ ಹೆಬ್ಬಗೋಡಿ ಸೇರಿದಂತೆ ಆರು ಪೊಲೀಸ್ ಠಾಣೆಗಳು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ವ್ಯಾಪ್ತಿಗೆ ಬರಲಿವೆ.

ಬೆಂಗಳೂರು ನೈಋತ್ಯ ವಿಭಾಗದ ಡಿಸಿಪಿಯಾಗಿ ಅನಿತಾ ಬಿ. ಹದ್ದಣ್ಣನವರ್ ಕಾರ್ಯ ನಿರ್ವಹಿಸಲಿದ್ದಾರೆ. ಪಶ್ಚಿಮ ವಿಭಾಗದ ವ್ಯಾಪ್ತಿಯಲ್ಲಿದ್ದ ಕೆಂಗೇರಿ, ಜ್ಞಾನಭಾರತಿ, ಆರ್.ಆರ್.ನಗರ, ಕುಂಬಳಗೋಡು, ದಕ್ಷಿಣ ವಿಭಾಗದ ತೆಕ್ಕೆಯಲ್ಲಿದ್ದ ಸುಬ್ರಮಣ್ಯಪುರ, ತಲಘಟ್ಟಪುರ, ಕುಮಾರಸ್ವಾಮಿ ಲೇಔಟ್, ಕೋಣನಕುಂಟೆ ಪೊಲೀಸ್ ಠಾಣೆಗಳು ನೈಋತ್ಯ ವಿಭಾಗಕ್ಕೆ ಸೇರ್ಪಡೆಯಾಗಿವೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ನಗರದ ಕೆಲ ವಿಭಾಗಗಳಲ್ಲಿ ಅಪರಾಧ ಚಟುವಟಿಕೆ ನಿಯಂತ್ರಣ ಜೊತೆಗೆ ಭವಿಷ್ಯದಲ್ಲಿ ಎದುರಾಗಬಹುದಾದ ಕಾನೂನು ಸುವ್ಯವಸ್ಥೆ ನಿಯಂತ್ರಿಸಲು ಕಾರ್ಯದೊತ್ತಡ ಹೆಚ್ಚಾಗುತ್ತಿರುವ ಪೊಲೀಸ್ ವಿಭಾಗಗಳಲ್ಲಿರುವ ಠಾಣೆಗಳನ್ನು ಪುನರ್ ವಿಂಗಡನೆ ಮಾಡುವಂತೆ ಪೊಲೀಸ್ ಇಲಾಖೆಯು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವಕ್ಕೆ ಅಸ್ತು ಎಂದಿರುವ ರಾಜ್ಯ ಸರಕಾರವು ಮೂರು ಹೊಸ ಪೊಲೀಸ್ ವಿಭಾಗಗಳನ್ನು ತೆರೆದು ಡಿಸಿಪಿಗಳ ನೇಮಕ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News