Bengaluru | ವಿಚಾರಣೆಗೆ ಬಂದಿದ್ದ ಆರೋಪಿಯಿಂದಲೇ 11 ಲಕ್ಷ ಹಣ ಎಗರಿಸಿದ ಹೆಡ್ ಕಾನ್‍ಸ್ಟೇಬಲ್! : ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಬೆಂಗಳೂರು : ಸೈಬರ್ ವಂಚನೆ ಪ್ರಕರಣದ ಆರೋಪಿಯನ್ನು ವಿಚಾರಣೆಗೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆದುಕೊಂಡು ಬಂದಿದ್ದ ವೇಳೆ, ಆರೋಪಿಯ ಕಾರಿನಲ್ಲಿದ್ದ 11 ಲಕ್ಷ ನಗದನ್ನು ಪೊಲೀಸ್ ಸಿಬ್ಬಂದಿಯೊಬ್ಬ ಕಳ್ಳತನ ಮಾಡಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ.
ಜಬಿವುಲ್ಲಾ ಎಂಬಾತನೇ ಕಳ್ಳತನ ಕೃತ್ಯ ಎಸಗಿದ ಪೊಲೀಸ್ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಈತ ಸೈಬರ್ ಕ್ರೈಂ ಠಾಣೆಯ ಹೆಡ್ ಕಾನ್‍ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ.
ಇತ್ತೀಚೆಗೆ ಸೈಬರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಲಾಗಿತ್ತು. ಆರೋಪಿ ಜೊತೆಗೆ ಆತನ ಕಾರನ್ನು ಸಿಸಿಬಿ ಅಧಿಕಾರಿಗಳು ನಗರ ಪೊಲೀಸ್ ಆಯುಕ್ತರ ಕಚೇರಿ ತೆಗೆದುಕೊಂಡು ಬಂದಿದ್ದರು. ಈ ವೇಳೆ ಕಾರಿನಲ್ಲಿ 11 ಲಕ್ಷ ರೂ. ಹಣವಿತ್ತು. ಆರೋಪಿಯನ್ನು ಪೊಲೀಸ್ ಆಯುಕ್ತರ ಕಚೇರಿಯೊಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಹೊರಗಡೆ ಕಾರಿನಲ್ಲಿದ್ದ 11 ಲಕ್ಷ ಹಣವನ್ನು ಹೆಡ್ ಕಾನ್‍ಸ್ಟೇಬಲ್ ಜಬಿವುಲ್ಲಾ ಕಳ್ಳತನ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇತ್ತ, ಸೈಬರ್ ಪ್ರಕರಣದ ಆರೋಪಿಯನ್ನು ಬಂಧಿಸಿದ್ದ ಇನ್‍ಸ್ಪೆಕ್ಟರ್ ಉಮೇಶ್ ಮತ್ತು ತಂಡ ಆತನನ್ನ ಜೈಲಿಗೆ ಕಳುಹಿಸಿತ್ತು. ಬಳಿಕ ಜಾಮೀನು ಪಡೆದು ಹೊರಬಂದ ಆರೋಪಿ ತನ್ನ ಕಾರಿನಲ್ಲಿ ಇದ್ದ ಹಣದ ಬ್ಯಾಗ್ ನಾಪತ್ತೆ ಆಗಿರುವುದರ ಬಗ್ಗೆ ಸೈಬರ್ ಪೊಲೀಸರ ಬಳಿ ಪ್ರಶ್ನಿಸಿದ್ದಾನೆ ಎನ್ನಲಾಗಿದೆ. ಆರೋಪಿಯ ಪ್ರಶ್ನೆಗೆ ಗಾಬರಿಗೊಂಡು ಪರಿಶೀಲನೆ ಮಾಡಿದಾಗ ಕಾರಿನಲ್ಲಿದ್ದ ಹಣವನ್ನು ಹೆಡ್ ಕಾನ್‍ಸ್ಟೇಬಲ್ ಜಬೀವುಲ್ಲಾ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ.
ಹಣ ಕಳೆದುಕೊಂಡ ವ್ಯಕ್ತಿಯಿಂದ ದೂರನ್ನು ಪಡೆದುಕೊಂಡು ಹೆಡ್ ಕಾನ್‍ಸ್ಟೇಬಲ್ ಜಬೀವುಲ್ಲಾನ ಮನೆ ಸರ್ಚ್ ಮಾಡಲು ಸಿಸಿಬಿ ಅಧಿಕಾರಿಗಳು ತೆರಳಿದಾಗ ಮನೆಯ ಬಳಿ ಜಬೀವುಲ್ಲಾ ಹೈಡ್ರಾಮಾ ಮಾಡಿದ್ದಾನೆ ಎನ್ನಲಾಗಿದೆ. ಕಳ್ಳತನದ ಬಗೆಗೆ ಗೊತ್ತೇ ಇಲ್ಲ ಎಂಬಂತೆ ವರ್ತಿಸಿದ್ದಾನೆ. ಮನೆಯೊಳಗೆ ಸಿಸಿಬಿ ಅಧಿಕಾರಿಗಳನ್ನು ಬಿಡದೆ ಗಲಾಟೆ ಮಾಡಿದ್ದಾನೆ. ಕೊನೆಗೆ ಜಬೀವುಲ್ಲಾನನ್ನು ತಡೆದು ಮನೆ ಸರ್ಚ್ ಮಾಡಿದಾಗ ತನ್ನ ಕೋಣೆಯ ಹಾಸಿಗೆ ಕೆಳಗೆ ಒಂದಷ್ಟು ಹಣ ಪತ್ತೆಯಾಗಿದೆ. ಅಲ್ಲದೇ, ಕಳವು ಮಾಡಿದ ಹಣದಿಂದಲೇ ಪತ್ನಿಗೆ ಚಿನ್ನಾಭರಣಗಳನ್ನೂ ಕೊಡಿಸಿದ್ದ ಎನ್ನಲಾಗಿದೆ.
ಸದ್ಯ ಹೆಡ್ ಕಾನ್‍ಸ್ಟೇಬಲ್ ಜಬಿವುಲ್ಲಾನಿಂದ 2 ಲಕ್ಷ ರೂ. ಹಣ ವಾಪಸ್ ಪಡೆಯಲಾಗಿದ್ದು, ಉಳಿದ ಹಣವನ್ನು ತಕ್ಷಣವೇ ಹಿಂತಿರುಗಿಸುವಂತೆ ಸಿಸಿಬಿ ಹಿರಿಯ ಅಧಿಕಾರಿಗಳು ಆದೇಶ ನೀಡಿರುವುದಾಗಿ ಮೂಲಗಳು ತಿಳಿಸಿವೆ.