×
Ad

ರಾಜ್ಯ ಸರಕಾರದಿಂದ ರೈತರಿಗೆ ಬರೆ ಎಳೆಯುವ ಕೆಲಸ : ವಿಜಯೇಂದ್ರ

Update: 2025-11-06 18:35 IST

ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಸರಕಾರವು ರೈತರಿಗೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ರೈತವಿರೋಧಿ ನಡವಳಿಕೆ ತೋರುತ್ತಿರುವುದು ಅಕ್ಷಮ್ಯ ಅಪರಾಧ, ಸಿಎಂ ತಾತ್ಸಾರ ಮನೋಭಾವನೆ ಬಿಟ್ಟು ಕಬ್ಬು ಬೆಳೆಗಾರರ ಸ್ಥಿತಿಯನ್ನು ಅರ್ಥಮಾಡಿಕೊಂಡು ಪರಿಹಾರ ಕಲ್ಪಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ರೈತರ ಬಗ್ಗೆ ನೈಜ ಕಾಳಜಿಯಿಂದ ಕೆಲಸ ಮಾಡುತ್ತಿಲ್ಲ. ರೈತರಿಗೆ ಸಹಕಾರಿ ಆಗುವಂತಹ ಕಾರ್ಯಕ್ರಮಗಳನ್ನು ನೀಡುವಲ್ಲಿ ಸಿದ್ದರಾಮಯ್ಯರ ನೇತೃತ್ವದ ಸರಕಾರ ವಿಫಲವಾಗಿದೆ ಎಂದು ದೂರಿದರು.

ಅತಿವೃಷ್ಟಿ ಸಂದರ್ಭದಲ್ಲೂ ಕೃಷಿ, ಕಂದಾಯ ಸಚಿವರು, ಇಲಾಖೆಯ ಕಾರ್ಯದರ್ಶಿಗಳು ಯಾವುದೇ ಜಿಲ್ಲೆಗೆ ತೆರಳಿಲ್ಲ, ಅಲ್ಲಿನ ರೈತರ ಪರಿಸ್ಥಿತಿಯನ್ನು ಅಧ್ಯಯನ ಮಾಡುವ ಪ್ರಯತ್ನವನ್ನೂ ಮಾಡಿಲ್ಲ. ನೆರೆಯ ಮಹಾರಾಷ್ಟ್ರ ಸರಕಾರವು ರೈತರಿಗೆ ಪರಿಹಾರ ಘೋಷಿಸಿದ್ದರೂ ರಾಜ್ಯದಲ್ಲಿ ಸಿದ್ದರಾಮಯ್ಯರ ನೇತೃತ್ವದ ಸರಕಾರವು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಕಬ್ಬು ಬೆಳೆಗಾರರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ಬಿಜಾಪುರ ಭಾಗದ ಬೆಳೆಗಾರರು ಸರಕಾರದ ಗಮನ ಸೆಳೆಯುವ ಕೆಲಸ ಮಾಡಿದರೂ, ಪರಿಹಾರ ಕೊಟ್ಟಿಲ್ಲ. ಯಾವುದೇ ಸಚಿವರು ಬೆಳೆಗಾರರನ್ನು ಭೇಟಿ ಮಾಡುವ ಪ್ರಯತ್ನ ಮಾಡಿರಲಿಲ್ಲ. ನಾನು ಮೊನ್ನೆ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿದ್ದೇನೆ ಎಂದರು.

ಈಗಲೂ ಕಾಲ ಮಿಂಚಿಲ್ಲ, ಕೇಂದ್ರ ಸರಕಾರವನ್ನು ದೂರುವುದನ್ನು ಬದಿಗಿಡಿ. ಕೇಂದ್ರದ ಬಗೆಗಿನ ಮುಖ್ಯಮಂತ್ರಿ, ಸಕ್ಕರೆ ಸಚಿವರ ಹೇಳಿಕೆ ಅರ್ಧ ಸತ್ಯ ಮಾತ್ರ. ಸರಕಾರ ಮನಸ್ಸು ಮಾಡಿದರೆ, ಸಕ್ಕರೆ ಕಾರ್ಖಾನೆ ಮಾಲಕರನ್ನು ಕೂರಿಸಿಕೊಂಡು ಬೆಳೆಗಾರರಿಗೆ ನ್ಯಾಯ ಕೊಡಲು ಸಾಧ್ಯವಿದೆ ಎಂದುತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News