×
Ad

ಬಿಜೆಪಿಯು ಲೇವಾದೇವಿಗಾರರು, ದೊಡ್ಡ ಉದ್ಯಮಿಗಳ ಪರವಾಗಿರುವ ಪಕ್ಷ : ವಿ.ಎಸ್.ಉಗ್ರಪ್ಪ

Update: 2025-02-15 20:21 IST

ಬೆಂಗಳೂರು : ‘ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಿ ನೆಪದಲ್ಲಿ ಜನರಿಗೆ ನೀಡುತ್ತಿದ್ದ ಕಿರುಕುಳ ತಪ್ಪಿಸಲು ರಾಜ್ಯ ಸರಕಾರ ಜಾರಿಗೆ ತಂದಿರುವ ‘ಸುಗ್ರೀವಾಜ್ಞೆ’ ಒಂದು ಕ್ರಾಂತಿಕಾರಕ ಕಾನೂನು. ಕೇಂದ್ರದ ಬಿಜೆಪಿ ಸರಕಾರಕ್ಕೆ ಜನಪರ ಬದ್ದತೆ ಇದ್ದರೆ ಇಂತಹ ಕಾನೂನು ಜಾರಿಗೆ ತರಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ.

ಶನಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಲೇವಾದೇವಿಗಾರರ ಪರ, ಮಾರ್ವಾಡಿಗಳ ಪರವಾಗಿರುವ ಪಕ್ಷ. ಈ ಪಕ್ಷ ಕೇವಲ ದೊಡ್ಡ, ದೊಡ್ಡ ಉದ್ಯಮಿಗಳ ಪರವಾಗಿರುವ ಪಕ್ಷ. ಅದಾನಿ ಮೇಲೆ ಅಮೆರಿಕಾದಲ್ಲಿ ದೊಡ್ಡ ಅಪರಾಧವೇ ಎದುರಾಗಿದೆ. ದೇಶದ ಪ್ರಧಾನಿ ಇದರ ಬಗ್ಗೆ ದೇಶದಲ್ಲಿ ಬಾಯಿಯೇ ಬಿಡುವುದಿಲ್ಲ. ಆದರೆ, ಅಮೆರಿಕಾದಲ್ಲಿ ಇದು ವೈಯಕ್ತಿಕ ವಿಚಾರ ಎಂದಿದ್ದಾರೆಂದು ಟೀಕಿಸಿದರು.

ಬಿಜೆಪಿಗೆ ಬಡವರ ಪರವಾಗಿ ಯಾವುದೇ ಕಾಳಜಿ, ಬದ್ದತೆಯಿಲ್ಲ. ಬಿಜೆಪಿಯವರಿಗೆ ಬದ್ದತೆಯಿದ್ದರೆ ಸಾಲದ ಕಪಿಮುಷ್ಠಿಯಲ್ಲಿ ಸಿಲುಕಿರುವ ರೈತರು, ಮಹಿಳೆಯರು, ಬಡವರನ್ನು ಕಾಪಾಡಬೇಕು ಎಂದು ಆಗ್ರಹಿಸಿದ ಉಗ್ರಪ್ಪ, ‘ಮೈಕ್ರೋ ಫೈನಾನ್ಸ್ ಮತ್ತು ಕಿರು ಸಾಲಗಳು(ಬಲವಂತದ ಕ್ರಮಗಳ ತಡೆಗಟ್ಟುವಿಕೆ) ಸುಗ್ರೀವಾಜ್ಞೆ -2025ಅನ್ನು ರಾಜ್ಯದ 4 ಕೋಟಿ ಜನರ ಹಿತ ಕಾಪಾಡುವ ದೃಷ್ಟಿಯಿಂದ ತಂದಿರುವುದು ಸ್ವಾಗತಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆರ್‌ಬಿಐ ನಿಯಮಾವಳಿ ಪ್ರಕಾರ 200ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್‌ ಗಳಿವೆ. 1ಸಾವಿರಕ್ಕೂ ಹೆಚ್ಚು ಸಹಕಾರಿ ಸಂಘಗಳಿವೆ. ಇವುಗಳು 1 ಲಕ್ಷದ 10 ಲಕ್ಷ ಕೋಟಿ ರೂ.ಮೊತ್ತದ ಸಾಲವನ್ನು ಸುಮಾರು 60 ಲಕ್ಷದ ಜನರಿಗೆ ಹಂಚಿಕೆ ಮಾಡಲಾಗಿದೆ. ಈ ಹಣದಲ್ಲಿ ಸುಮಾರು 60 ಸಾವಿರ ಕೋಟಿ ರೂ.ಗಳನ್ನು ನೋಂದಾಯಿತ ಸಂಸ್ಥೆಗಳು ನೀಡಿವೆ. ಮಿಕ್ಕ 50 ಸಾವಿರ ಕೋಟಿ ರೂ.ಗಳನ್ನು ನೋಂದಣಿಯಿಲ್ಲದ ಸಂಸ್ಥೆ, ವ್ಯಕ್ತಿಗಳು ನೀಡಿದ್ದಾರೆ ಎಂದರು.

ಈ ಹಣ ನೀಡಿದ ಸಂಸ್ಥೆಗಳು ವಸೂಲಿ ಮಾಡುವ ವೇಳೆಯಲ್ಲಿ ಬಲವಂತದ ಕ್ರಮ ಸೇರಿದಂತೆ ಮೊದಲೇ ಖಾಲಿ ಚೆಕ್‍ಗಳನ್ನು ಪಡೆದು ನೀಡುತ್ತಿರುವ ಕಿರುಕುಳಕ್ಕೆ ಈ ಕಾನೂನಿನ ಮೂಲಕ ಚಾಟಿ ಬೀಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ. ಇದೇ ರೀತಿ 1973-75ರಲ್ಲಿಯೂ ಋಣಮುಕ್ತ ಯೋಜನೆ ಜಾರಿಗೆ ತರಲಾಗಿತ್ತು. 2013 ರಲ್ಲಿ ರೈತರ ಸಾಲಮನ್ನಾ ಮಾಡಲಾಗಿತ್ತು ಎಂದರು.

ಮೈಕ್ರೋ ಫೈನಾನ್ಸ್ ಕಂಪೆನಿಗಳು ಗ್ರಾಹಕರಿಂದ ಯಾವುದೇ ಭದ್ರತೆ ಅಥವಾ ವಸ್ತುಗಳನ್ನು ಅಡವಿಟ್ಟುಕೊಳ್ಳಬಾರದು. ಸುಸ್ಥಿ ಸಾಲುಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ 3 ತಿಂಗಳಿಗೆ ಒಮ್ಮೆ ನೀಡಬೇಕು. ಸಂಸ್ಥೆಗಳು ಸರಿಯಾಗಿ ಮಾಹಿತಿ ನೀಡದೆ ಇದ್ದರೆ ಜೈಲು ಶಿಕ್ಷೆಗೆ ಒಳಡಿಸಬಹುದು. ಗ್ರಾಹಕರಿಗೆ ಹೆಚ್ಚಿನ ಕಿರುಕುಳ ನೀಡಿದರೆ 10 ವರ್ಷ ಜೈಲು ಶಿಕ್ಷೆ, 5 ಲಕ್ಷ ರೂ.ದಂಡ ವಿಧಿಸಬಹುದು. ಇದನ್ನು ಜಾಮೀನು ರಹಿತ ಅಪರಾಧ ಎಂದು ತೀರ್ಮಾನ ಮಾಡಲಾಗಿದೆ. ಎಲ್ಲ ಪ್ರಕರಣಗಳು ಡಿವೈಎಸ್ ಪಿ ಹಂತದಲ್ಲಿ ತನಿಖೆಯಾಗಬೇಕು ಎಂದೂ ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ.

ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ಈ ಮೊದಲು ರಾಜ್ಯಪಾಲರು ಸುಗ್ರೀವಾಜ್ಞೆಗೆ ಅಂಕಿತ ಹಾಕಿರಲಿಲ್ಲ, ನಂತರ ಸರಕಾರದಿಂದ ಸ್ಪಷ್ಟನೆ ಸಿಕ್ಕಿದ ಮೇಲೆ ಫೆ.12ರಂದು ಅಂಕಿತ ಹಾಕಿದರು. ಇದರಿಂದ ಲಕ್ಷಾಂತರ ಜನರ ಜೀವ ಮತ್ತು ಜೀವನ ಉಳಿಯುತ್ತದೆ. ಇದು ಕಾಂಗ್ರೆಸ್ ಸರಕಾರದ ಕ್ರಾಂತಿಕಾರಕ ಆಲೋಚನೆ ಎಂದು ಬಣ್ಣಿಸಿದರು.

‘ಮೈಕ್ರೋ ಫೈನಾನ್ಸ್ ಕಂಪೆನಿಗಳ ಕುರಿತ ಸುಗ್ರೀವಾಜ್ಞೆಯಿಂದ ಲೇವಾದೇವಿಗಾರರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಇದರಿಂದ ರೈತರ, ಕಾರ್ಮಿಕರ, ಮಹಿಳೆಯರ ಕಿರುಕುಳ ತಪ್ಪಿಸಬಹುದು. ಅನ್ಯಾಯದ ಬಡ್ಡಿ ಹಾಕಿ ಮಾಡುತ್ತಿದ್ದ ಶೋಷಣೆ ತಪ್ಪಿಸಬಹುದು. ಜೊತೆಗೆ ಆನ್‍ಲೈನ್ ವಂಚನೆ ಬಗ್ಗೆಯೂ ಆದಷ್ಟೂ ಬೇಗ ಸುಗ್ರೀವಾಜ್ಞೆ ತಂದು ಸಾಮಾನ್ಯ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು’

-ಪ್ರಕಾಶ್ ರಾಥೋಡ್ ವಿಧಾನ ಪರಿಷತ್ ಮಾಜಿ ಸದಸ್ಯ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News