×
Ad

ಬಳ್ಳಾರಿ | ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

Update: 2026-03-02 21:54 IST

ಬಳ್ಳಾರಿ/ಕಂಪ್ಲಿ: ಪಟ್ಟಣದ ಬಿಎಸ್‌ವೈ ಗಾರ್ಡನ್‌ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಆಯೋಜಿಸಿದ್ದ ಸರ್ವಧರ್ಮೀಯ ಇಫ್ತಾರ್ ಕೂಟದ ಜಾಗೃತಿ ಸಭೆ ಭಾನುವಾರ ಸಂಜೆ ನಡೆಯಿತು.

ಇಲಕಲ್‌ನ ನಿವೃತ್ತ ಶಿಕ್ಷಕ ಕಂದಗಲ್ ಲಾಲ್‌ಹುಸೇನ್ ಸಾಬ್ ಮಾತನಾಡಿ, ಇಸ್ಲಾಂ ಧರ್ಮದಲ್ಲಿ ರಮಝಾನ್‌ ಮಾಸವನ್ನು ಕಡ್ಡಾಯ ಉಪವಾಸದ ಪವಿತ್ರ ಅವಧಿಯಾಗಿ ಪಾಲಿಸಲಾಗುತ್ತದೆ. ಉಪವಾಸ ಆಚರಿಸುವವರೊಂದಿಗೆ ಆಹಾರ ಹಂಚಿಕೊಂಡರೂ ಉಪವಾಸದ ಪುಣ್ಯ ಲಭಿಸುತ್ತದೆ ಎಂದು ಹೇಳಿದರು.

ಹಿರಿಯರು ಸಂಸ್ಕಾರವಂತರಾದರೆ ಮಕ್ಕಳು ಸಹ ಅದನ್ನೇ ಅನುಸರಿಸುತ್ತಾರೆ. ಪಂಚೇಂದ್ರಿಯಗಳನ್ನು ನಿಯಂತ್ರಿಸುವುದೇ ರಮಝಾನ್‌ ಆಚರಣೆಯ ಮೂಲ ಉದ್ದೇಶವಾಗಿದೆ. ಭಯೋತ್ಪಾದನೆ, ಕೋಮುವಾದ, ಭ್ರಷ್ಟಾಚಾರ, ಮೋಸ ಹಾಗೂ ದುರಾಸೆಗಳಿಗೆ ದೇವಭಯದ ಕೊರತೆಯೇ ಕಾರಣವಾಗಿದೆ. ಮಾನವೀಯತೆ ಬೆಳಗಲು ದೇವಭಯ ಅಗತ್ಯವಿದೆ ಎಂದು ಅವರು ತಿಳಿಸಿದರು.

ಕುರಾನ್ ಕೇವಲ ಮುಸ್ಲಿಮರ ಧರ್ಮಗ್ರಂಥವಲ್ಲ. ಸಮಸ್ತ ಮನುಕುಲದ ಉದ್ಧಾರಕ್ಕಾಗಿ ನೀಡಿರುವ ಮಾರ್ಗದರ್ಶಕ ಗ್ರಂಥವಾಗಿದೆ. ಮನುಷ್ಯ ಮನುಷ್ಯತ್ವವನ್ನು ಮರೆತ ಪರಿಣಾಮ ಅನಾಚಾರಗಳು ನಡೆಯುತ್ತಿವೆ. ಪ್ರತಿಯೊಂದು ಪಾಪ–ಪುಣ್ಯಕ್ಕೂ ಲೆಕ್ಕವಿದ್ದು ಅಂತಿಮವಾಗಿ ದೇವನಿಗೆ ಉತ್ತರಿಸಬೇಕಾಗುತ್ತದೆ ಎಂದು ಲಾಲ್‌ಹುಸೇನ್ ಸಾಬ್ ಹೇಳಿದರು.

ಸೈಯದ್ ಷಾಹ್ ಅಬ್ದುಲ್ ವಾಹೀದ್ ಖಾದ್ರಿ ಸಾಹೇಬ್, ಸೈಯದ್ ಷಾಹ್ ಕರಿಮುಲ್ಲಾಖಾದ್ರಿ, ಎಚ್.ವೀರಾಪುರದ ಜ್ಞಾನಜ್ಯೋತಿ ಶಿವಮಂದಿರದ ಜಡೇಶತಾತ ಸಾನ್ನಿಧ್ಯವಹಿಸಿದ್ದರು.

ಜಮಾಅತೆ ಇಸ್ಲಾಮೀ ಹಿಂದ್ ಸಂಚಾಲಕ ವಾಸೀಮ್ ಫಯಾಝ್‌ ಅಧ್ಯಕ್ಷತೆ ವಹಿಸಿದ್ದರು. ಜಮಾಅತೆ ಜಿಲ್ಲಾ ಸಂಚಾಲಕ ಡಾ.ಸೈಯದ್ ಜೈನುಲ್ಲಾ ಅಬುದಿನ್‌ಖಾದ್ರಿ, ಜಿಲ್ಲಾ ಉಪಾಧ್ಯಕ್ಷೆ ನೂರ್‌ಜಹಾ ಸಾಹೀಬಾ, ವಲಯ ಅಧ್ಯಕ್ಷ ಅನ್ವರ್‌ಬಾಷ ಉಮ್ರಿ, ಪ್ರಮುಖರಾದ ಎನ್.ಹಬೀಬ್ ರೆಹಮಾನ್, ಕೆ.ಎಸ್.ಚಾಂದ್‌ಭಾಷ, ನೌಷಾದ್‌ಅಹ್ಮದ್ ಹಾಫೀಜ್, ಅತಾವುಲ್ಲಾ ರೆಹಮಾನ್, ಕೆ.ಮಸ್ತಾನ್, ಎಸ್.ಕೆ.ಇಂತಿಯಾಜ್, ಅಹ್ಮದ್, ಖಲಂದರ್, ಸಾಧಿಕ್, ಪಾಸ್ಟರ್ ಪಾಲ್‌ಪಂಪಾಪತಿ, ಜೈನ್‌ಧರ್ಮದ ಪ್ರಮುಖರಾದ ಶಾಂತಿಲಾಲ್ ಸಿಂಘ್ವಿ, ಶಾಂತಿಲಾಲ್ ಬಾಲಾರ್, ಹಿಂದೂ ಪ್ರಮುಖರಾದ ಪಿ.ನಾಗೇಶ್ವರರಾವ್, ಷಣ್ಮುಖಪ್ಪ ಚಿತ್ರಗಾರ, ಕೆ.ಎಂ.ಹೇಮಯ್ಯಸ್ವಾಮಿ, ನೀರಗಂಟಿ ವೀರೇಶ್, ಎಲ್.ರಾಘವೇಂದ್ರ ಇತರರಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News