×
Ad

ದುಬೈನಲ್ಲಿ ಸಿಲುಕಿದ ಬಳ್ಳಾರಿ ಜಿಲ್ಲೆಯ 52 ಪ್ರವಾಸಿಗರು: ತುರ್ತು ಕ್ರಮಕ್ಕೆ ಶಾಸಕ ಬಿ. ನಾಗೇಂದ್ರ ಮನವಿ

Update: 2026-03-01 14:54 IST

ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬಿ.ನಾಗೇಂದ್ರ ಅವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅಪರ ಮುಖ್ಯ ಕಾರ್ಯದರ್ಶಿಯವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ದುಬೈ ಪ್ರವಾಸಕ್ಕೆ ತೆರಳಿದ್ದ ಬಳ್ಳಾರಿ ಜಿಲ್ಲೆಯ 52 ಮಂದಿ ಪ್ರವಾಸಿಗರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಹಲವು ವಿಮಾನ ಸೇವೆಗಳು ತಾತ್ಕಾಲಿಕವಾಗಿ ರದ್ದಾಗಿರುವುದರಿಂದ ದುಬೈಗೆ ತೆರಳಿದ್ದ ಪ್ರವಾಸಿಗರು ಅಲ್ಲೇ ಸಿಲುಕಿಕೊಂಡಿದ್ದಾರೆ. ಇವರಲ್ಲಿ ಬಳ್ಳಾರಿ ನಗರ ಮತ್ತು ಗ್ರಾಮಾಂತರ ಭಾಗಗಳಿಂದ 25 ಮಹಿಳೆಯರು ಹಾಗೂ 7 ಪುರುಷರು ಸೇರಿ 32 ಮಂದಿ, ಸಿರುಗುಪ್ಪ ಭಾಗದಿಂದ 20 ಮಂದಿ ಸೇರಿ ಒಟ್ಟು 52 ಮಂದಿ ಇದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ ಕುರಿತು ಕಾಳಜಿ ವ್ಯಕ್ತಪಡಿಸಿದ ಶಾಸಕ ಬಿ. ನಾಗೇಂದ್ರ ಅವರು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಎಲ್ಲರನ್ನು ಶೀಘ್ರ ಹಾಗೂ ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಿಲುಕಿಕೊಂಡಿರುವ ಪ್ರವಾಸಿಗರ ಸುರಕ್ಷತೆ ಮತ್ತು ಮರಳುವ ವ್ಯವಸ್ಥೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News