×
Ad

ಬೆಂಗಳೂರಿನಲ್ಲಿ ದಿಲ್ಲಿಯ ನಂತರದ ದೊಡ್ಡ ಮೆಟ್ರೊ ಸಂಚಾರ ಜಾಲ : ತೇಜಸ್ವಿ ಸೂರ್ಯ

Update: 2025-08-07 21:10 IST

ಬೆಂಗಳೂರು : ಬೆಂಗಳೂರಿನ ಮೆಟ್ರೋ ಸಂಪರ್ಕ ಜಾಲ ಸುಮಾರು 100 ಕಿ.ಮೀ. ತಲುಪಲು ಪ್ರಧಾನಿ ಮೋದಿ ನೇತೃತ್ವದ ಸರಕಾರವು ಮೂಲಭೂತ ಸೌಕರ್ಯಕ್ಕೆ ಕೊಟ್ಟ ಆದ್ಯತೆಯೇ ಪ್ರಮುಖ ಕಾರಣ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯಾಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಗುರುವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಮೋದಿಯವರು ಪ್ರಧಾನಿ ಆಗುವುದಕ್ಕೆ ಮೊದಲು ಬೆಂಗಳೂರಿನ ಮೆಟ್ರೊ ಸಂಪರ್ಕ ಜಾಲ ಇದ್ದುದು ಸುಮಾರು 7.5ಕಿಮೀ., ಆ.10ರಂದು ಯೆಲ್ಲೋ ಲೈನ್ ಉದ್ಘಾಟನೆಯ ನಂತರ ಬೆಂಗಳೂರಿನ ಮೆಟ್ರೋ ಸಂಪರ್ಕ ಜಾಲ ಸುಮಾರು 100 ಕಿಮೀ ತಲುಪಲಿದೆ. ದಿಲ್ಲಿಯ ನಂತರ ಅತಿ ಹೆಚ್ಚು ಕನೆಕ್ಟಿವಿಟಿ ಇರುವ, ವಿಸ್ತರಣೆ ಆಗುತ್ತಿರುವ ಮೆಟ್ರೊ ಇದು ಎಂದರು.

ಪ್ರಧಾನಿಯವರನ್ನು ಯಾರು ಕರೆಸಿದರು ಎಂಬುದಕ್ಕೆ ಉತ್ತರಿಸುವ ಅಗತ್ಯವಿಲ್ಲ. ಬೆಂಗಳೂರಿನ ಮೆಟ್ರೊ ಬೇಗ ಉದ್ಘಾಟನೆ ಆಗಬೇಕು, ವಿಳಂಬ ಸಲ್ಲದೆಂದು ಪ್ರಧಾನಿಯವರು ದಿನಾಂಕ ನಿಗದಿಪಡಿಸಿ ಬರುತ್ತಿದ್ದಾರೆ. ಅವರು ಕರ್ನಾಟಕ, ದಿಲ್ಲಿ ಮಾತ್ರವಲ್ಲ ಭಾರತದ ಪ್ರಧಾನಿ. ಅವರ ಆಗಮಿಸುವಿಕೆಯನ್ನು ರಾಜ್ಯ ಸರಕಾರ, ಬಿಜೆಪಿ, ಇಲ್ಲಿನ ಜನತೆ ಉತ್ಸಾಹ-ಹಬ್ಬದಂತೆ ಸ್ವಾಗತಿಸಲು ಸಜ್ಜಾಗಬೇಕಿದೆ ಎಂದು ತಿಳಿಸಿದರು.

ಸಿಎಂ, ಡಿಸಿಎಂ ತಲೆ ಕೆಡಿಸಿಕೊಂಡಿಲ್ಲ: ರಾಜ್ಯ ಸರಕಾರ ಅದರಲ್ಲೂ ವಿಶೇಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿನ್ನೆ ಯೆಲ್ಲೋ ಲೈನಿನ ಮೆಟ್ರೊದಲ್ಲಿ ಓಡಾಡಿದರು. ಇದು ಶೇ.50-50ರ ಯೋಜನೆ. ನಮ್ಮದೂ ಕೊಡುಗೆ ಇದೆ ಎಂದಿದ್ದಾರೆ. ಎರಡೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಯೆಲ್ಲೋ ಲೈನ್ ಮೆಟ್ರೊ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಸೂರ್ಯ ಆರೋಪಿಸಿದರು.

ಆ.10ರಂದು ಪ್ರಧಾನಿ ಮೆಟ್ರೋ ಲೈನ್ ಉದ್ಘಾಟಿಸಲು ಆಗಮಿಸುತ್ತಾರೆಂದ ತಕ್ಷಣ, ನಿನ್ನೆ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಈ ಮೆಟ್ರೊ ಲೈನಿನ ಕೆಲಸ 2018ರಲ್ಲಿ ಆರಂಭವಾಗಿತ್ತು. 2021ಕ್ಕೆ ಇದು ಪೂರ್ಣಗೊಳ್ಳಬೇಕಿತ್ತು. ಕೋವಿಡ್‍ನಿಂದ ಕೆಲವು ಸಮಸ್ಯೆಗಳಾದವು. ಭೂಮಿ ಸ್ವಾಧೀನದಲ್ಲೂ ಕೆಲವು ಸಮಸ್ಯೆಗಳಾದವು. ಆಗ ಕಾಂಗ್ರೆಸ್ಸಿನವರು, ಇನ್ನೊಬ್ಬರಾಗಲೀ ಸಹಾಯಕ್ಕೆ ಬರಲಿಲ್ಲ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News