ಬೆಂಗಳೂರು | ರೈತರ ಸಾಲಮನ್ನಾ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ಧರಣಿ
ಬೆಂಗಳೂರು, ಆ.11: ರೈತ ವಿರೋಧಿ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದು, ರೈತರ ಸಾಲ ಮನ್ನಾ ಹಾಗೂ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಧರಣಿ ನಡೆಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಮಾತನಾಡಿ, ದೇಶದಲ್ಲಿ ಶೇ.80ರಷ್ಟು ಜನ ಕೃಷಿ ಕೆಲಸವನ್ನು ಅವಲಂಭಿಸಿದ್ದು, ಆದರೆ ಸರಕಾರಗಳು ರೈತರನ್ನು 2ನೇ ದರ್ಜೆಯ ಪ್ರಜೆಗಳಂತೆ ಕಾಣುತ್ತಿವೆ. ರೈತ ವಿರೋಧಿ ಕಾನೂನುಗಳು ರೈತರ ಬದುಕಿಗೆ ಕಂಟಕವಾಗುತ್ತಿವೆ. ಕೇಂದ್ರ ಸರಕಾರ ಈಗಾಗಲೇ ಕೃಷಿ ಮಾರುಕಟ್ಟೆ ಕಾಯ್ದೆ, ಅಗತ್ಯವಸ್ತುಗಳ ತಿದ್ದುಪಡಿ ಕಾಯ್ದೆ ಸೇರಿ 3 ಕೃಷಿ ಕಾಯ್ದೆ ಹಿಂಪಡೆದಿದೆ. ರಾಜ್ಯ ಸರಕಾರವೂ ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರೈತರು ಖಾಸಗಿ ಬ್ಯಾಂಕ್ ಹಾಗೂ ಕೈ ಸಾಲಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಆತ್ಮಹತ್ಯೆಗಳನ್ನು ತಡೆಯಲು ಸರಕಾರ ರೈತರ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ರೈತ ಮುಖಂಡರಾದ ಸುಭಾಷ್ ನಾಯ್ಕ್, ಬಂಡೆಪ್ಪಗೌಡ ಪಾಟೀಲ್, ಫಕೀರಪ್ಪ ಪೂಜಾರಿ ಮತ್ತಿತರರು ಹಾಜರಿದ್ದರು.