ಬೆಂಗಳೂರು | ಸಿಲಿಂಡರ್ ಸ್ಫೋಟ ದುರಂತ ಸ್ಥಳಕ್ಕೆ ಸಚಿವ ಝಮೀರ್ ಅಹ್ಮದ್ ಖಾನ್ ಭೇಟಿ
ಬೆಂಗಳೂರು, ಆ.16: ವಿಲ್ಸನ್ ಗಾರ್ಡನ್‍ನ ಚಿನ್ನಯ್ಯನ ಪಾಳ್ಯದಲ್ಲಿ ಸಿಲಿಂಡರ್ ಸ್ಫೋಟಗೊಂಡು ದುರಂತ ನಡೆದ ಸ್ಥಳ ಹಾಗೂ ನರ್ಗತಪೇಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಶನಿವಾರ ಸಚಿವ ಝಮೀರ್ ಅಹ್ಮದ್ ಖಾನ್ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪರಿಹಾರ ನೀಡಿದರು.
ಚಿನ್ನಯ್ಯನ ಪಾಳ್ಯದಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ ಮನೆಗಳು ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ ಮೃತ ಬಾಲಕನ ಕುಟುಂಬಕ್ಕೆ ಐದು ಲಕ್ಷ ರೂ., ತಾಯಿ-ಮಗಳು ಗಾಯಳು ಕುಟುಂಬಕ್ಕೆ ಎರಡು ಲಕ್ಷ ರೂ., ಇಬ್ಬರು ಗಾಯಾಳು ಕುಟುಂಬಕ್ಕೆ ಎರಡು ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ ತಲಾ 25 ಸಾವಿರ ರೂ. ಪರಿಹಾರವನ್ನು ಅವರು ನೀಡಿದರು.
ನಂತರ ಬೆಂಗಳೂರು ನಗರ್ತ ಪೇಟೆಯಲ್ಲಿ ಅಗ್ನಿ ಆಕಸ್ಮಿಕ ನಡೆದ ಸ್ಥಳಕ್ಕೆ ಭೇಟಿ ನೀಡಿದ ಝಮೀರ್ ಅಹ್ಮದ್ ಖಾನ್, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮದನ್, ಸುರೇಶ್ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೆ-ಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಕಾಂಗ್ರೆಸ್ ಮುಖಂಡ ಯುವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.