ಧರ್ಮಸ್ಥಳ ಪ್ರಕರಣ | ʼಡಿಸಿಎಂ, ಸಚಿವರು ಸೇರಿದಂತೆ ವಿಪಕ್ಷ ಸದಸ್ಯರ ಹೇಳಿಕೆಗಳು ಕಾನೂನು ವಿರೋಧಿʼ : ಜಾಗೃತ ನಾಗರಿಕರು-ಕರ್ನಾಟಕ
ಬೆಂಗಳೂರು, ಆ.17 : ‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಪ್ರಕರಣವನ್ನು ತನಿಖೆ ಮಾಡಲು ಸರಕಾರವು ವಿಶೇಷ ತನಿಖಾ ದಳವನ್ನು(ಎಸ್‍ಐಟಿ) ರಚನೆ ಮಾಡಿರುವುದು ಸ್ವಾಗತಾರ್ಹ. ಆದರೆ ಉಪಮುಖ್ಯಮಂತ್ರಿ, ಸಚಿವರು ಹಾಗೂ ವಿಪಕ್ಷ ಸದಸ್ಯರು ಕಾನೂನು ವಿರೋಧಿ ಹೇಳಿಕೆಗಳು ಆಕ್ಷೇಪಾರ್ಹ’ ಎಂದು ಸಾಹಿತಿ, ಕಲಾವಿದರು, ಪ್ರಗತಿಪರರು ಸೇರಿ ಹಲವು ಗಣ್ಯರು ಖಂಡಿಸಿದ್ದಾರೆ.
ರವಿವಾರದಂದು ಜಾಗೃತ ನಾಗರಿಕರು-ಕರ್ನಾಟಕ ಹೆಸರಿನಲ್ಲಿ ಚಿಂತಕರಾದ ಪ್ರೊ.ಕೆ.ಮರುಳಸಿದ್ದಪ್ಪ, ಡಾ.ಜಿ. ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಿಮಲಾ ಕೆ.ಎಸ್., ಡಾ. ಬಂಜಗೆರೆ ಜಯಪ್ರಕಾಶ್, ಬಿ.ಶ್ರೀಪಾದ ಭಟ್, ಟಿ.ಸುರೇಂದ್ರ ರಾವ್, ಡಾ.ಮೀನಾಕ್ಷಿ ಬಾಳಿ, ಡಾ.ವಸುಂಧರಾ ಭೂಪತಿ, ಡಾ.ಎನ್.ಗಾಯತ್ರಿ, ನೀಲಾ ಕೆ., ಜಾಣಗೆರೆ ವೆಂಕಟರಾಮಯ್ಯ, ರುದ್ರಪ್ಪ ಹುನಗವಾಡಿ, ಇಂದಿರಾ ಕೃಷ್ಣಪ್ಪ, ಮಾವಳ್ಳಿ ಶಂಕರ್ ಪ್ರಕಟನೆ ಹೊರಡಿಸಿದ್ದಾರೆ.
ಧರ್ಮಸ್ಥಳದ ಸುತ್ತಮುತ್ತ ನಾಲ್ಕು ದಶಕಗಳಿಂದ ದೌರ್ಜನ್ಯ, ಅತ್ಯಾಚಾರ, ಕೊಲೆ, ಭೂ ಕಬಳಿಕೆ ಪ್ರಕರಣಗಳು ಮುನ್ನೆಲೆಗೆ ಬರುತ್ತಲೇ ಇವೆ. ಬಾಲಕಿಯರ, ಯುವತಿಯರ ಮೇಲಿನ ಅತ್ಯಾಚಾರ, ಕೊಲೆಗಳಿಗೆ ನ್ಯಾಯ ಕೊಡಬೇಕಾಗಿದೆ. ಹೆತ್ತ ತಾಯಂದಿರಿಗೆ ಕನಿಷ್ಟ ಸಾಂತ್ವನದ ಹೆಜ್ಜೆಗಳಾಗಿ ಎಸ್‍ಐಟಿ ತನಿಖೆ ಮಾಡಲಾಗುತ್ತಿದೆ. ಆದರೆ ಸಚಿವರು ಕಾನೂನುಬಾಹಿರವಾಗಿ ಹೇಳಿಕೆ ನೀಡಿ ತನಿಖೆಯನ್ನು ಗೊಂದಲಕ್ಕೆ ದೂಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಶಾಲಾ ಕಾಲೇಜುಗಳಿಗೆ ಹೋದ ವಿದ್ಯಾರ್ಥಿನಿಯರು ನಾಪತ್ತೆಯಾಗಿ, ನಂತರ ಶವವಾಗಿ ಸಿಕ್ಕಿರುವ ಘಟನೆಗಳು ನಡೆದಿವೆ. ಅತ್ಯಾಚಾರ ನಡೆದ ಕುರುಹುಗಳನ್ನೂ ಮೈಮೇಲೆ ಹೊತ್ತು ಸಿಕ್ಕ ಸೌಜನ್ಯಳ ಶವಗಳು, ಆನೆ ಮಾವುತ ನಾರಾಯಣ, ತಂಗಿ ಯಮುನಾ, ಶಿಕ್ಷಕಿ ವೇದವಲ್ಲಿ, ವಿದ್ಯಾರ್ಥಿನಿ ಪದ್ಮಲತಾ ಸೇರಿ ಬಹು ಚರ್ಚಿತ ಪ್ರಕರಣಗಳು ಸಂಕಟಗಳಾಗಿ ಕಾಡುತ್ತಿವೆ ಎಂದು ಸಾಹಿತಿಗಳು ತಿಳಿಸಿದ್ದಾರೆ.
ಸತ್ಯವನ್ನು ಬಯಲಿಗೆಳೆದು ಅಪರಾಧ ಎಸಗಿದವರು ಯಾರೇ ಇದ್ದರೂ ನೆಲದ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗಬೇಕು. ಆದರೆ ವಿಧಾನಸಭಾ ಅಧಿವೇಶನದಲ್ಲಿ ಉಪಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ಆಡಿದ ಮಾತುಗಳು ನಮಗೆ ಆಘಾತ ಉಂಟುಮಾಡಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿಗಳ ಹೇಳಿಕೆಗಳೂ ಎಸ್.ಐ.ಟಿ. ಅಧಿಕಾರಿಗಳ ಧೃತಿಗೆಡಿಸುವಂತೆ ಇದೆ ಎಂದು ಅವರು ಖಂಡಿಸಿದ್ದಾರೆ.
ಬಿಜೆಪಿ ಸರಕಾರವಿದ್ದಾಗ ಕೊಲೆ, ಅತ್ಯಾಚಾರಗಳಂತಹ ಹೇಯ ಕೃತ್ಯ ಎಸಗಿದವರನ್ನು ಪತ್ತೆ ಮಾಡಲು ಯಾವುದೇ ಪ್ರಯತ್ನ ಮಾಡಿಲ್ಲ. ಆದರೆ ಈಗ ತನಿಖೆ ನಡೆಯುತ್ತಿರುವ ಕಾರಣ, ವಿರೋಧ ಪಕ್ಷವಾದ ಬಿಜೆಪಿಯ ಶಾಸಕರು ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡು ಜನರನ್ನು ಅನಗತ್ಯವಾಗಿ ಭಾವನಾತ್ಮಕವಾಗಿ ಪ್ರಚೋದಿಸುತ್ತಿದ್ದಾರೆ. ತನಿಖೆಗೆ ಅಡ್ಡಿ ಪಡಿಸುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ ಎಂದು ಸಾಹಿತಿಗಳು ಆತಂಕ ವ್ಯಕ್ತಪಡಿಸಿದ್ದಾರೆ.