ಮಡಿವಾಳ ಕೆರೆಯ ಪಾರ್ಕ್‍ಗೆ ‘ಮಡಿವಾಳ ಮಾಚಿದೇವರ ಹೆಸರು’ : ರಾಮಲಿಂಗಾ ರೆಡ್ಡಿ
ಬೆಂಗಳೂರು, ಆ.17: ನಗರದಲ್ಲಿರುವ ಮಡಿವಾಳದ ಕೆರೆ ಬಳಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ಸುಸಜ್ಜಿತ ಪಾರ್ಕ್‍ಗೆ ಮಡಿವಾಳ ಸಮುದಾಯದ ಆರಾಧ್ಯ ದೈವ ಮಡಿವಾಳ ಮಾಚಿದೇವರ ಹೆಸರನ್ನು ನಾಮಕರಣ ಮಾಡಲಾಗುತ್ತದೆ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದ್ದಾರೆ.
ರವಿವಾರ ನಗರದ ಶಿಕ್ಷಕರ ಸದನದಲ್ಲಿ ಕರ್ನಾಟಕ ರಾಜ್ಯ ಮಡಿವಾಳ ಸಂಘದಿಂದ ಆಯೋಜಿಸಿದ್ದ ‘ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಪ್ರದಾನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಡಿವಾಳದಲ್ಲಿ ಅತಿ ದೊಡ್ಡ ಕೆರೆಯಿದ್ದು, ಅದರ ಪಕ್ಕ ಸುಮಾರು 40 ಎಕರೆ ಪ್ರದೇಶದಲ್ಲಿ ಇದೀಗ 15 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಿಸುತ್ತಿದ್ದೇವೆ. ಇದಕ್ಕೆ ಮಾಚಿದೇವರ ಹೆಸರನ್ನು ಇಡಲಾಗುವುದು ಎಂದರು.
ಮಡಿವಾಳದ ಸಿಲ್ಕ್ ಬೋರ್ಡ್‍ಗೆ ಮಡಿವಾಳ ಮಾಚಿದೇವರ ಮೇಲ್ಸೇತುವೆ ಎಂದು ಹೆಸರಿಡಲಾಗಿದೆ. ಸಮಾಜಕ್ಕೆ ಮಾದರಿಯಾದವರು, ಸೇವೆ ಸಲ್ಲಿಸಿದವರು ಜನಮಾನಸದಲ್ಲಿ ಅಚ್ಚಳಿಯದೇ ಉಳಿಯವಂತೆ ಮಾಡಲಾಗಿದೆ. ವಿಜಯಪುರದ ದೇವರಹಿಪ್ಪರಗಿಯಲ್ಲಿ ಈ ಹಿಂದೆ ಸಿದ್ದರಾಮಯ್ಯ ಸರಕಾರ 300 ಕೋಟಿ ರೂ. ಹಣ ನೀಡಿ ದೇವಸ್ಥಾನ ಅಭಿವೃದ್ಧಿಪಡಿಸಿದೆ. ಜೊತೆಗೆ ಅಲ್ಲಿನ ಬಸ್ ನಿಲ್ದಾಣಕ್ಕೆ ಮಾಚಿದೇವರ ಹೆಸರನ್ನು ನಾಮಕರಣ ಮಾಡಲಾಗಿದೆ. ನಗರದ ಎಚ್.ಎ.ಎಲ್ ರಸ್ತೆಗೂ ಮಾಚಿದೇವರ ಹೆಸರನ್ನಿಡಲಾಗಿದೆ. ಮಾಚಿದೇವರ ಪ್ರತಿಮೆ ಸ್ಥಾಪನೆಗೂ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.
ಮಡಿವಾಳ ಸಮಾಜದ ಕುಲಕಸಬನ್ನು ಬೇರೆ ಸಮಾಜ, ಧರ್ಮದವರೂ ಮಾಡುತ್ತಿದ್ದು, ಇದೀಗ ಪೈಪೋಟಿ ಹೆಚ್ಚಾಗಿದೆ. ಮಡಿವಾಳ ಸಮುದಾಯದಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಮಕ್ಕಳನ್ನು ಓದಿಸಿ ಮತ್ತಷ್ಟು ಉನ್ನತ ಹುದ್ದೆಗೇರುವಂತೆ ನೋಡಿಕೊಳ್ಳಬೇಕು. ಸರಕಾರ ಸಮುದಾಯದ ಹಿತ ರಕ್ಷಣೆಗೆ ಆದ್ಯತೆ ನೀಡಿದ್ದು, ನಿಮ್ಮ ಸಮಸ್ಯೆಗಳನ್ನು ಈಡೇರಿಸಲು ಒತ್ತು ನೀಡುತ್ತೇವೆ ಎಂದು ಅವರು ತಿಳಿಸಿದರು.
ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಮಾತನಾಡಿ, ಮಡಿವಾಳ ಸಮಾಜ ರಾಜ್ಯದಲ್ಲಿ 25 ಲಕ್ಷ ಜನಸಂಖ್ಯೆ ಇದ್ದು, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಮುದಾಯ ಅತ್ಯಂತ ಹಿಂದುಳಿದಿದೆ. ಶಿಕ್ಷಣದಿಂದ ಮಾತ್ರ ನಮ್ಮ ಏಳಿಗೆ ಸಾಧ್ಯ ಎಂದು ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ಮಡಿವಾಳ ಸಂಘ ಪ್ರಧಾನ ಕಾರ್ಯದರ್ಶಿ ಬಿ.ಆರ್.ಪ್ರಕಾಶ್ ಮಾತನಾಡಿ, ಎಸೆಸೆಲ್ಸಿ ಮತ್ತು ಪಿಯುಸಿ ಶಿಕ್ಷಣ ನಂತರ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲಿ ಎಂದು 410 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ. ಭವಿಷ್ಯದಲ್ಲಿ ಇವರೆಲ್ಲರೂ ಉತ್ತಮ ವಿದ್ಯಾವಂತರಾಗಿ ರೂಪಗೊಂಡು ದೇಶದ ಅಭಿವೃದ್ದಿಗೆ ಕೊಡುಗೆ ನೀಡುವಂತಾಗಬೇಕು. ಮಡಿವಾಳ ಅಭಿವೃದ್ಧಿ ನಿಗಮಕ್ಕೆ ಕೂಡಲೇ ಅಧ್ಯಕ್ಷರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಸರಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ. ರೇವಣ್ಣ, ಗುರುಪೀಠ ವಿಶ್ವಸ್ಥ ಸಮಿತಿ ಟ್ರಸ್ಟ್ ನ ಪೀಠಾಧ್ಯಕ್ಷ ಶಿವಯೋಗಾನಂದ ಪುರಿ ಸ್ವಾಮೀಜಿ, ಮೂಡಬಿದರೆಯ ಕ್ಷೇತ್ರ ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ, ಚಿತ್ರದುರ್ಗದ ಮಾಚಿದೇವರ ಮಹಾ ಸಂಸ್ಥಾನ ಮಠದ ಡಾ. ಬಸವ ಮಾಚಿದೇವ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.