×
Ad

ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಹೊಂದಿದ ಸದೃಢ ಭಾರತ ನಿರ್ಮಾಣ ಸಾಧ್ಯ : ಮನ್ಸೂರ್ ಅಲಿ ಖಾನ್

Update: 2025-08-17 21:44 IST

ಬೆಂಗಳೂರು, ಆ.17: ಶಿಕ್ಷಣ ಹಾಗೂ ಅಭಿವೃದ್ಧಿ ಒಂದಕ್ಕೊಂದು ಪೂರಕವಾಗಿದೆ. ನಮ್ಮ ದೇಶದ ಜನಸಂಖ್ಯೆ 140 ಕೋಟಿ ದಾಟಿದೆ. ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಭಾರತ ನಿಲ್ಲಬೇಕಾದರೆ ಶಿಕ್ಷಣದ ಶಕ್ತಿಯಿಂದ ಮಾತ್ರ ಸಾಧ್ಯ ಎಂದು ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್ ತಿಳಿಸಿದರು.

ರವಿವಾರ ಮಹದೇವಪುರ ಕ್ಷೇತ್ರದ ಕಾಡುಗುಡಿಯಲ್ಲಿ ಡಿವೈನ್ ಸರ್ವೀಸ್ ಫಾರ್ ಎವರ್ ಫೌಂಡೇಶನ್(ಡಿಎಸ್‍ಎಫ್) ವತಿಯಿಂದ 2025ನೆ ಸಾಲಿನಲ್ಲಿ ಎಸೆಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಯಾವ ಸಮುದಾಯ, ದೇಶ ಮಹಿಳೆಯರನ್ನು ಗೌರವಿಸುವುದಿಲ್ಲವೊ, ಅಂತಹ ಸಮುದಾಯ, ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನಮ್ಮ ಸಮುದಾಯದಲ್ಲಿ ಕಳೆದ 30-40 ವರ್ಷಗಳ ಹಿಂದೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಸಾಧನೆ ಶ್ಲಾಘನೀಯವಾಗಿದೆ ಎಂದು ಮನ್ಸೂರ್ ಅಲಿ ಖಾನ್ ತಿಳಿಸಿದರು.

ಡಿಎಸ್‍ಎಫ್ ಶಿಕ್ಷಣ ಕ್ಷೇತ್ರದ ಬಲವರ್ಧನೆಗಾಗಿ ತಮ್ಮ ಆದ ರೀತಿಯಲ್ಲಿ ಅತ್ಯುತ್ತಮ ಕೆಲಸವನ್ನು ಮಾಡುತ್ತಿದೆ. ಇಂದಿನ ಮಕ್ಕಳೆ ನಾಳೆಯ ಪ್ರಜೆಗಳು ಎಂದು ಕೇಳುತ್ತಿದ್ದೆವು. ಆದರೆ, ಈಗ ಇಂದಿನ ಮಕ್ಕಳೆ ನಮ್ಮ ದೇಶದ ಭವಿಷ್ಯ. ಆದುದರಿಂದ, ದೇಶದ ಭವಿಷ್ಯ ಸುಭದ್ರವಾಗಿರಬೇಕಾದರೆ ಈ ಮಕ್ಕಳನ್ನು ಸರಿಯಾದ ಮಾರ್ಗದರ್ಶನದ ಮೂಲಕ ಮುಂದೆ ಸಾಗಿಸಬೇಕಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ. ಶಿಕ್ಷಣದ ಸ್ವರೂಪ ಬದಲಾಗುತ್ತಿದೆ. ತಂತ್ರಜ್ಞಾನದ ನೆರವಿನಿಂದಾಗಿ ಇಂದು ಬೆರಳ ತುದಿಯಲ್ಲಿ ಮಾಹಿತಿಯ ಖಣಜ ನಿಮ್ಮ ಮುಂದೆ ಲಭ್ಯವಾಗುತ್ತಿದೆ. ಶಿಕ್ಷಣ ಹಾಗೂ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ಯಶಸ್ಸು ಸಾಧ್ಯ ಎಂದು ಮನ್ಸೂರ್ ಅಲಿ ಖಾನ್ ಕಿವಿಮಾತು ಹೇಳಿದರು.

ಡಿಎಸ್‍ಎಫ್ ಸಂಸ್ಥಾಪಕ ಟ್ರಸ್ಟಿ ಡಾ.ಸೈಯದ್ ಮುಝಮ್ಮಿಲ್ ಅಹ್ಮದ್ ಮಾತನಾಡಿ, ಇಂದಿನ ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳನ್ನುಗಳಿಸಿ ಉತ್ತೀರ್ಣರಾಗಿರುವ 750 ಮಕ್ಕಳ ಸಾಧನೆ ಗುರುತಿಸಿ, ಪದಕ, ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸುವ ಕೆಲಸ ಮಾಡಿದ್ದೇವೆ. ನಮ್ಮ ಸಂಸ್ಥೆ 13 ವರ್ಷಗಳಿಂದ 84 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ವ್ಯಕ್ತಿತ್ವ ವಿಕಸನದ ಮಾರ್ಗದರ್ಶನ ನೀಡಿ, ಪರೀಕ್ಷೆಗೆ ಸಿದ್ಧಗೊಳಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಸೆ.14ರಂದು ಹೊಸಕೋಟೆಯ ಅಂಬೇಡ್ಕರ್ ಭವನದಲ್ಲಿಯೂ ಕಾರ್ಯಕ್ರಮ ಆಯೋಜಿಸಿದ್ದೇವೆ. ಆನಂತರ, ಕೋಲಾರ, ಮಾಲೂರು, ವಿಜಯಪುರದಲ್ಲಿಯೂ ಕಾರ್ಯಕ್ರಮ ಮಾಡುತ್ತಿದ್ದೇವೆ. ಪ್ರತಿಯೊಂದು ಮನೆಯಲ್ಲಿಯೂ ಪದವೀಧರರು ಇರಬೇಕು ಎಂಬುದು ನಮ್ಮ ಉದ್ದೇಶ. ಆದುದರಿಂದ, ಒಂದು ಚಳವಳಿಯ ರೀತಿಯಲ್ಲಿ ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಎಸ್‍ಟಿ ಉಪ ಆಯುಕ್ತ ರಫಿ ಪಾಷ, ಸ್ಟ್ಯಾಂಪು ಮತ್ತು ನೋಂದಣಿ ಇಲಾಖೆಯ ಉಪ ನೋಂದಣಾಧಿಕಾರಿ ಆಯಿಷಾ ತಬಸ್ಸುಮ್, ಪ್ರಾಜೆಕ್ಟ್ ಶಿಕ್ಷಾ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥೆ ಸ್ನೇಹಾ ಚಾವ್ಲಾ, ಮಹದೇವಪುರ ಮುಸ್ಲಿಮ್ ಟ್ರಸ್ಟ್ ಅಧ್ಯಕ್ಷ ಗಫಾರ್ ಬೇಗ್, ಡಿಎಸ್‍ಎಫ್ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ತಬ್ರೇಝ್ ಪಾಷ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News