×
Ad

ಬೇಜವಾಬ್ದಾರಿ ಎಪಿಎಂಸಿ ಅಧಿಕಾರಿಗಳ ಅಮಾನತ್ತಿಗೆ ಸಚಿವ ಶಿವಾನಂದ ಪಾಟೀಲ್ ನಿರ್ದೇಶನ

Update: 2025-08-23 23:42 IST

ಬೆಂಗಳೂರು, ಆ.23: ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ಹಾಗೂ ವಿಳಂಬ ನೀತಿ ಅನುಸರಿಸುವ ಎಪಿಎಂಸಿ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶನಿವಾರ ನಗರದ ಕೃಷಿ ಮಾರುಕಟ್ಟೆ ಇಲಾಖೆ ಸಭಾಂಗಣದಲ್ಲಿ ನಾಲ್ಕು ಕಂದಾಯ ವಿಭಾಗಗಳ ಎಪಿಎಂಸಿ ಅಧಿಕಾರಿಗಳ ಸಭೆ ನಡೆಸಿದ ಅವರು, ನಿಗದಿತ ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸದ ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.

ಮೂಲ ಸೌಕರ್ಯ ನಿರ್ಮಾಣ ಮತ್ತು ಶೀಥಲ ಗೃಹ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಒಂದು ವಾರದಲ್ಲಿ ಮತ್ತೆ ಸಭೆ ಕರೆಯಲಿದ್ದು, ಇದುವರೆಗೆ ನಬಾರ್ಡ್, ಐಆರ್‍ಡಿಎಫ್ ನಿಂದ ಎಷ್ಟು ನೆರವು ಲಭ್ಯವಾಗಿದೆ. ಈ ನೆರವು ಮತ್ತು ಎಪಿಎಂಸಿ ಅನುದಾನದಲ್ಲಿ ಯಾವ ಯಾವ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಅವುಗಳ ಸ್ಥಿತಿಗತಿ ಏನು? ಯಾವ ಯೋಜನೆಗಳು ಅಗತ್ಯವಿಲ್ಲ ಎಂಬ ಬಗ್ಗೆ ವರದಿ ಕೊಡಿ ಎಂದು ಸೂಚನೆ ನೀಡಿದರು.

ಏಳು ಹೊಸ ಎಪಿಎಂಸಿಗಳು ಅಸ್ತಿತ್ವಕ್ಕೆ ಬಂದಿವೆ. ಹೊಸ ಎಪಿಎಂಸಿಗಳನ್ನು ಹೊರತುಪಡಿಸಿ ಇತರ ಎಪಿಎಂಸಿಗಳಲ್ಲಿ ಇದುವರೆಗೆ ಏಕೆ ಮೂಲಸೌಕರ್ಯ ನಿರ್ಮಿಸಿಲ್ಲ. ರಸ್ತೆ, ಚರಂಡಿ ಮತ್ತು ಫ್ಲಾಟ್‍ಫಾರ್ಮಗಳು ಅಗತ್ಯವಿದ್ದು, ಯಾವ ಯಾವ ಎಪಿಎಂಸಿಗಳಲ್ಲಿ ಮೂಲಸೌಕರ್ಯ ಇದುವರೆಗೆ ಆಗಿಲ್ಲ ಎಂದು ಪ್ರಶ್ನಿಸಿದ ಅವರು, ಕಾಂಕ್ರೀಟ್ ರಸ್ತೆಗಳನ್ನು ಮಳೆಗಾಲದ ಸಮಯದಲ್ಲೆ ನಿರ್ಮಾಣ ಮಾಡುವುದು ಸೂಕ್ತ. ವಿಳಂಬಕ್ಕೆ ಮಳೆಗಾಲದ ನೆಪ ನೀಡಬೇಡಿ ಎಂದರು.

ಅನುದಾನ ಲಭ್ಯ ಇದೆ ಎಂಬ ಕಾರಣಕ್ಕೆ ಗೋದಾಮುಗಳನ್ನು ನಿರ್ಮಾಣ ಮಾಡಬೇಡಿ. ಬಹುತೇಕ ಎಪಿಎಂಸಿಗಳಲ್ಲಿ ಗೋದಾಮುಗಳು ಖಾಲಿ ಇವೆ. ಇಂತಹ ಗೋದಾಮುಗಳನ್ನು ಕಡಿಮೆ ದರದಲ್ಲಿ ಬಾಡಿಗೆ ಕೊಡುತ್ತಿದ್ದೇವೆ. ಅಗತ್ಯ ಇರುವ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಬೇಕು ಎಂದು ಶಿವಾನಂದ ಪಾಟೀಲ್ ಸೂಚಿಸಿದರು.

ಎಲ್ಲ ವಿಭಾಗಗಳಲ್ಲಿ ಎಷ್ಟು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಎಷ್ಟು ಟೆಂಡರ್ ಕರೆಯಲಾಗಿದೆ ಎಂಬ ಬಗ್ಗೆ ವರದಿ ಕೊಡಿ. ಅನುಮೋದನೆ ದೊರಕಿದ್ದರೂ ಅನಗತ್ಯ ಎಂದು ಕಂಡುಬಂದರೆ ಅಂತಹ ಕಾಮಗಾರಿಗಳನ್ನು ಸ್ಥಗಿತಗೊಳಿಸಿ, ಒಂದು ವೇಳೆ ಟೆಂಡರ್ ಆಗಿದ್ದರೆ ಮಾತ್ರ ಮುಂದುವರಿಸಿ ಎಂದು ಅವರ ಸೂಚಿಸಿದರು.

ಎಪಿಎಂಸಿಗಳ ಆಸ್ತಿ ರಕ್ಷಣೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ, ಅನೇಕ ಕಟ್ಟಡಗಳು ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿವೆ. ಎಪಿಎಂಸಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾನೇ ಲೋಪ ಗುರುತಿಸಿ ಸೂಚನೆ ನೀಡಿದ್ದೇನೆ. ಕಟ್ಟಡಗಳ ಸಂರಕ್ಷಣೆ ಕಡೆಗೂ ಅಧಿಕಾರಿಗಳು ಗಮನ ನೀಡಬೇಕು ಎಂದು ಶಿವಾನಂದ ಪಾಟೀಲ್ ತಿಳಿಸಿದರು.

ಮುಂದಿನ ಸಭೆ ವೇಳೆಗೆ ಪ್ರತಿಯೊಂದು ಎಪಿಎಂಸಿಗಳ ವರದಿ ಬೇಕು. ಏನೇನು ಕೆಲಸ ಆಗಬೇಕಿದೆ? ಈಗ ಕೈಗೊಂಡಿರುವ ಕಾಮಗಾರಿಗಳು ಯಾವ ಕಾರಣಕ್ಕೆ ವಿಳಂಬವಾಗಿವೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಇದುವರೆಗೂ ಮೂಲಸೌಕರ್ಯಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ ಎಂದರೆ ಹೇಗೆ ಎಂದು ಅವರು ಪ್ರಶ್ನಿಸಿದರು.

ಸಭೆಯಲ್ಲಿ ಕೃಷಿ ಮಾರುಕಟ್ಟೆ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ಪುಷ್ಪಾ, ಜಂಟಿ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಅಧೀಕ್ಷಕ ಅಭಿಯಂತರ ರಘುನಂದನ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News