ಬೆಳೆಹಾನಿ : ಕಾರಿನಲ್ಲೇ ಕುಳಿತು ಜಿಲ್ಲಾಧಿಕಾರಿಗಳ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ
ಬೆಂಗಳೂರು, ಆ.26: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಬೆಳೆಹಾನಿ ಹಾಗೂ ಬರ ಸ್ಥಿತಿಯ ಬಗೆಗಿನ ಜಿಲ್ಲಾಧಿಕಾರಿಗಳ ಸಭೆಯನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಾರಿನ ಪ್ರಯಾಣದ ವೇಳೆಯೆ ನಡೆಸುವ ಮೂಲಕ ಸಮಯ ಹಾಗೂ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೆ ಒತ್ತು ನೀಡಿದರು.
ಮಂಗಳವಾರ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು. ಕೃಷ್ಣ ಬೈರೇಗೌಡ ಅವರು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ನಡೆಸುತ್ತಿರುವ ಮೊದಲ ಸಭೆ ಇದಾಗಿದೆ.
ಸಭೆಗೆ ಬೆಂಗಳೂರಿನಿಂದ ಕಾರಿನಲ್ಲಿ ಹೊರಟ ಕೃಷ್ಣ ಬೈರೇಗೌಡ, ಪ್ರಯಾಣದ ಸಮಯ ವ್ಯರ್ಥ ಮಾಡದೆ ಎಲ್ಲ ಜಿಲ್ಲಾಧಿಕಾರಿಗಳು, ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತರ ಸಭೆ ನಡೆಸಿದರು.
ರಾಜ್ಯಾದ್ಯಂತ ಈ ವರ್ಷದ ಮಳೆಯ ಪ್ರಮಾಣದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು ಬೀದರ್ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಜಲಾಶಯಗಳು ಬಹುತೇಕ ಭರ್ತಿಯಾಗಿವೆ.
ಆದರೆ ಕೆಲ ಜಿಲ್ಲೆಗಳಲ್ಲಿ ಮಾತ್ರ ಮಳೆಯಿಂದಾಗಿ ಬೆಳೆ ನಾಶವಾಗಿದ್ದು, ಶೀಘ್ರ ಈ ಮಾಹಿತಿಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲು ಸೂಚಿಸಲಾಯಿತು. ಅಲ್ಲದೆ ಮಳೆ ಹಾಗೂ ಸಿಡಿಲಿನ ಕಾರಣಕ್ಕೆ 51 ಜನ ಮೃತಪಟ್ಟಿದ್ದರೆ, 329 ಜಾನುವಾರುಗಳು ಮೃತಪಟ್ಟಿವೆ. ಮಳೆಗೆ 121 ಮನೆಗಳೂ ಸಂಪೂರ್ಣ ಕುಸಿದಿದ್ದು ಎಲ್ಲರಿಗೂ ಶೀಘ್ರ ಪರಿಹಾರ ನೀಡಲು ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.