‘ಕೆಪಿಟಿಸಿಎಲ್’ ಸ್ಟೇಷನ್ ಪರಿಚಾರಕ, ಪವರ್ ಮ್ಯಾನ್ ಹುದ್ದೆಗಳ ಆಯ್ಕೆ ಪಟ್ಟಿ ಪ್ರಕಟ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಆ. 29: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್)ವು ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಸಿಹಿಸುದ್ದಿ ನೀಡಿದ್ದು, ವಿವಿಧ ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.
ಇಂಧನ ಸಚಿವ ಕೆ.ಜೆ.ಜಾರ್ಜ್‍ರ ನಿರ್ದೇಶನದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗಿತ್ತು. 2024ರ ಅಕ್ಟೋಬರ್‍ನಲ್ಲಿ 433 ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆ ಮತ್ತು 90 ಕಿರಿಯ ಪವರ್ ಮ್ಯಾನ್ ಹುದ್ದೆ ಸೇರಿದಂತೆ ಒಟ್ಟು 523 ನಿರ್ವಹಣಾ ಪದ ವೃಂದದ ಹುದ್ದೆಗಳ ನೇಮಕಾತಿಗೆ ಕೆಪಿಟಿಸಿಎಲ್ ಅಧಿಸೂಚನೆ ಹೊರಡಿಸಿತ್ತು. ಮೇ 2025ರಲ್ಲಿ ರಾಜ್ಯದ ವಿವಿದೆಡೆ ಸಹನ ಶಕ್ತಿ ಪರೀಕ್ಷೆ ನಡೆಸಲಾಗಿತ್ತು.
ಇದೀಗ ಅಂತಿಮವಾಗಿ ಕಿರಿಯ ಸ್ಟೆಷನ್ ಪರಿಚಾರಕ ಮತ್ತು ಕಿರಿಯ ಪವರ್‍ಮ್ಯಾನ್ ಹುದ್ದೆಗಳಿಗೆ ಆಯ್ಕೆಗೊಂಡ 491 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಪ್ರಕಟಿಸಿತ್ತು. ಅಭ್ಯರ್ಥಿಗಳಿಂದ ನಿಗದಿತ ಸಮಯದಲ್ಲಿ ಬಂದ ಆಕ್ಷೇಪಣೆಗಳನ್ನು ಪರೀಶಿಲಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ಆಗಸ್ಟ್ 2025 ರಲ್ಲಿ ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದ್ದು, htpps://kptcl.karnataka.gov.in/recruitment ಜಾಲತಾಣದಲ್ಲಿ ಆಯ್ಕೆ ಪಟ್ಟಿ ಲಭ್ಯವಿದೆ.
ಕೆಪಿಟಿಸಿಎಲ್ ಉದ್ಯೋಗದ ಭರವಸೆಯಲ್ಲಿದ್ದ 2,600ಕ್ಕೂ ಹೆಚ್ಚು ಅಭ್ಯರ್ಥಿಗಳು ಮೇ ತಿಂಗಳಿನಲ್ಲಿ ನಡೆದಿದ್ದ ಸಹನ ಶಕ್ತಿ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ 2 ತಿಂಗಳಲ್ಲೇ ನಿಗಮ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಇಲಾಖೆಯು ಉದ್ಯೋಗದ ಗ್ಯಾರಂಟಿ ನೀಡಿದೆ. ಉಳಿದಂತೆ, ವಿವಿಧ ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ಕೈಗೊಳ್ಳಲಾಗಿರುವ ಕಿರಿಯ ಪವರ್‍ಮ್ಯಾನ್ ಹುದ್ದೆಯ ನೇಮಕಾತಿಗೆ ಆಯ್ಕೆ ಪಟ್ಟಿಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.