×
Ad

ದೇಶಕ್ಕಾಗಿ ಸರ್ವ ತ್ಯಾಗಕ್ಕೂ ಸಿದ್ಧರಾಗಿದ್ದ ನೇತಾಜಿ ಸುಭಾಶ್‌ಚಂದ್ರ ಬೋಸ್ : ಜಿ.ಪರಮೇಶ್ವರ್

ಪ್ರೊ.ಕೆ.ಈ.ರಾಧಕೃಷ್ಣ ಅನುವಾದಿಸಿರುವ ಸುಭಾಶ್‍ಚಂದ್ರ ಬೋಸ್ ರವರ ಪುಸ್ತಕಗಳ ಬಿಡುಗಡೆ

Update: 2025-08-31 00:06 IST

ಬೆಂಗಳೂರು, ಆ.30 : ಸ್ವತಂತ್ರ ಭಾರತವನ್ನು ಹೇಗೆ ಇಟ್ಟುಕೊಳ್ಳಬೇಕು, ಗಳಿಸಿದ ಸ್ವಾತಂತ್ರ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಂದಿನ ಯುವಜನತೆ ಯೋಚನೆ ಮಾಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ನೇತಾಜಿ ಸುಭಾಶ್‌ಚಂದ್ರ ಬೋಸ್ ಟ್ರಸ್ಟ್, ಸನ್‌ಸ್ಟಾರ್ ಪಬ್ಲಿಷರ್ಸ್ ವತಿಯಿಂದ ನಗರದ ಪುರಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಕೆ.ಈ.ರಾಧಾಕೃಷ್ಣ ಅನುವಾದಿಸಿರುವ ನೇತಾಜಿ ಸುಭಾಶ್‌ಚಂದ್ರ ಬೋಸ್‌ರವರ ಒಂದು ಅಪೂರ್ಣ ಆತ್ಮಕಥೆ, ಭಾರತೀಯ ಹೋರಾಟ, ಅಸಾಮಾನ್ಯ ದಿನಚರಿ ಮೂರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಶ್‌ಚಂದ್ರ ಬೋಸ್ ಸೇರಿದಂತೆ ಹಲವರು ಸ್ವಾತಂತ್ರ್ಯ ತಂದುಕೊಟ್ಟಿರುವ ಬಗ್ಗೆ ಮುಂದಿನ ಪೀಳಿಗೆ ಹೇಗೆ ಯೋಚಿಸುತ್ತಿದೆ ಎಂಬುದು ಮುಖ್ಯವಾಗಿದೆ. ಇಲ್ಲವಾದರೆ ದೇಶಕ್ಕೆ ಸ್ವಾತಂತ್ರ್ಯ ಹಾಗೆಯೇ ಬಂದಿದೆ ಎಂಬ ಭಾವನೆ ಅವರಲ್ಲಿ ಬರುತ್ತದೆ ಎಂದು ಅವರು ತಿಳಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಗಳಿಸಲು ಏನು ಬೇಕಾದರೂ ತ್ಯಾಗ ಮಾಡುತ್ತೇನೆ. ಬ್ರಿಟಿಷರನ್ನು ದೇಶದಿಂದ ತೊಲಗಿಸಿ, ದೇಶಕ್ಕೆ ಎಷ್ಟು ಬೇಗ ಸ್ವಾತಂತ್ರ್ಯವನ್ನು ತಂದುಕೊಡಬೇಕು ಎಂಬ ಉದ್ದೇಶದ ಇಚ್ಛಾಶಕ್ತಿಯನ್ನು ನೇತಾಜಿ ಅವರು ಹೊಂದಿದ್ದರು. ಸ್ವಾತಂತ್ರ್ಯಕ್ಕಾಗಿ ನೇತಾಜಿ ಸುಭಾಶ್‌ಚಂದ್ರ ಬೋಸ್ ತೆಗೆದುಕೊಂಡ ಸಿದ್ಧಾಂತದ ದಾರಿ ಹಾಗೂ ಗಾಂಧೀಜಿಯವರ ದಾರಿ ಬೇರೆಯಾಗಿತ್ತು. ಆದರೆ, ಭಾರತಕ್ಕೆ ಸ್ವಾತಂತ್ರ್ಯ ತರಬೇಕು. ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿಸಬೇಕು ಎಂಬುದು ಇಬ್ಬರ ಉದ್ದೇಶವಾಗಿತ್ತು ಎಂದು ಹೇಳಿದರು.

ಶಿಕ್ಷಣ ನಮ್ಮನ್ನು ಸಾಕಷ್ಟು ಬದಲಾಯಿಸಿದೆ. ಭಾರತ ಬಲಿಷ್ಠ ಭಾರತವಾಗಿದ್ದರೆ, ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಶಕ್ತಿಯುತವಾಗಿದ್ದರೆ ಅದು ಶಿಕ್ಷಣದಿಂದ ಸಾಧ್ಯವಾಗಿದೆ. ಪ್ರಪಂಚದ ಯಾವುದೇ ಭಾಗಕ್ಕೆ ಹೋದರೂ ಭಾರತದ ಇಂಜಿನಿಯರ್, ವೈದ್ಯರು, ಪ್ರಾಧ್ಯಾಪಕರಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕೊಲ್ಕತ್ತಾದ ನೇತಾಜಿ ಸುಭಾಶ್‌ಚಂದ್ರ ಬೋಸ್ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಸುಮಂತ್ರ ಬೋಸ್, ಭಾರತೀಯ ಸೇನೆಯ ನಿವೃತ್ತ ಉಪ ದಂಡನಾಯಕ ಲೆ.ಜನರಲ್ ರಮೇಶ್ ಹಲಗಲಿ, ಲೇಖಕ ಪ್ರೊ.ಕೆ.ಈ.ರಾಧಕೃಷ್ಣ, ಬೆಂಗಳೂರಿನ ನೇತಾಜಿ ಸುಭಾಶ್‌ಚಂದ್ರ ಬೋಸ್ ಟ್ರಸ್ಟ್‌ನ ಅಧ್ಯಕ್ಷ ಎಂ.ರಾಜ್‌ಕುಮಾರ್, ಟ್ರಸ್ಟಿಗಳು ಉಪಸ್ಥಿತರಿದ್ದರು.

ನೇತಾಜಿ ಅವರು ಉದಾತ್ತ ಆರ್ಥಿಕ ತಜ್ಞರಾಗಿದ್ದರು. ಅವರು ತೆಗೆದುಕೊಂಡ ತೀರ್ಮಾನಗಳು ಭಾರತ ಆರ್ಥಿಕ ವ್ಯವಸ್ಥೆಯನ್ನು ಇಂದು ಗಟ್ಟಿಗೊಳಿಸಿದೆ. ಇಂದು ನಾವು ಭಾರತ ಆರ್ಥಿಕವಾಗಿ ಸದೃಢವಾಗಿದೆ ಎಂಬ ಕೆಚ್ಚೆದೆಯ ಮಾತುಗಳನ್ನಾಡುತ್ತೇವೆ ಎಂದರೆ, ಅದರ ಬುನಾದಿ ನೇತಾಜಿ ಅವರು ಹಾಕಿದ್ದರು.

-ಡಾ.ಜಿ.ಪರಮೇಶ್ವರ್, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News