×
Ad

ಸಿಎಂ ನಿವಾಸದ ಬಳಿ ಹೊತ್ತಿ ಉರಿದ ಕಾರು!

Update: 2025-09-12 19:41 IST

ಬೆಂಗಳೂರು, ಸೆ.12: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ ಬಳಿ ಇದ್ದಕ್ಕಿದ್ದಂತೆ ಕಾರಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಶುಕ್ರವಾರ ನಡೆದಿದೆ.

ಕಾರಿನಲ್ಲಿದ್ದ ಸಾಫ್ಟ್‌ ವೇರ್ ಎಂಜಿನಿಯರ್ ಸಚಿನ್ ಎಂಬುವರು ಹಾಗೂ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಚಿನ್ ಅವರು ಕಾರಿನಲ್ಲಿ ಕೋರಮಂಗಲದಿಂದ ಗಂಗಾನಗರದಲ್ಲಿರುವ ಸಬ್‍ರಿಜಿಸ್ಟ್ರರ್ ಕಚೇರಿಗೆ ಆಸ್ತಿ ನೋಂದಣಿಗಾಗಿ ತೆರಳುತ್ತಿದ್ದರು. ಸಿಎಂ ಮನೆ ಸಮೀಪದ ಅರಮನೆ ರಸ್ತೆಯ ವಿಲ್ಸನ್ ಮ್ಯಾನರ್ ಸೇತುವೆಯ ಸರ್ವೀಸ್ ರಸ್ತೆಯಲ್ಲಿ ಕಾರಿನ ಮುಂಭಾಗದ ಎಂಜಿನ್‍ನಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿದೆ.

ತಕ್ಷಣ ಚಾಲಕ ಅಪಾಯ ಅರಿತು ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಸಚಿನ್ ಹಾಗೂ ಚಾಲಕ ಇಬ್ಬರೂ ಕಾರಿನಿಂದ ಇಳಿದಿದ್ದಾರೆ. ಚಾಲಕ ಕಾರಿನ ಮುಂದಿನ ಬಾನೆಟ್ ತೆಗೆಯುತ್ತಿದ್ದಂತೆಯೇ ಬೆಂಕಿ ಆವರಿಸಿದ್ದರಿಂದ ಅವರು ಹಿಂದೆ ಸರಿದಿದ್ದಾರೆ. ಸಚಿನ್ ಅವರು ಎಚ್ಚೆತ್ತುಕೊಂಡು ಕಾರಿನಲ್ಲಿದ್ದ ದಾಖಲೆ ಮತ್ತು ಕೆಲ ವಸ್ತುಗಳನ್ನು ಹೊರಗೆ ತೆಗೆದುಕೊಂಡಿದ್ದಾರೆ.

ನೋಡ ನೋಡುತ್ತಿದ್ದಂತೆ ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಕಾರಿನ ಟೈರ್ ಮತ್ತು ಡೀಸೆಲ್ ಟ್ಯಾಂಕ್ ಸ್ಫೋಟಗೊಂಡಿದೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನಾ ಹೈಗ್ರೌಂಡ್ಸ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಸಲು ಯತ್ನಿಸಿದ್ದು, ಘಟನೆಯ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ, ಪೊಲೀಸರು ಸುಟ್ಟು ಹೋದ ಕಾರನ್ನು ಅಲ್ಲಿಂದ ತೆರವುಗೊಳಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News