×
Ad

‘ವಿದೇಶ ಅಧ್ಯಯನ ಎಕ್ಸ್‌ಪೋʼ ನಲ್ಲಿ 10ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

Update: 2025-08-17 21:37 IST

ಸಾಂದರ್ಭಿಕ ಚಿತ್ರ | PC : Freepik

ಬೆಂಗಳೂರು, ಆ.17: ರವಿವಾರ ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ(ಕೆವಿಟಿಎಸ್‍ಡಿಸಿ) ಆಯೋಜಿಸಿದ್ದ ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ'ಗೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು, 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಕ್ಸ್‌ಪೋ ನಲ್ಲಿ ಭಾಗಿಯಾಗಿದ್ದರು.

65 ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳು ಎಕ್ಸ್‌ಪೋದಲ್ಲಿ ಭಾಗವಹಿಸಿದ್ದು, ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡಿದವು. ಭಾಗವಹಿಸಿದ್ದ ಎಲ್ಲರೂ ವಿದೇಶಿ ವಿ.ವಿ.ಗಳಿಗೆ ದಾಖಲಾಗುತ್ತಾರೆ ಎಂಬ ಖಾತ್ರಿ ಇಲ್ಲದಿದ್ದರೂ, ಕನಿಷ್ಠ ಶೇ.50ರಷ್ಟು ಮಂದಿಯಾದರೂ ಉತ್ತಮ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟಿರುವ ವಿಶ್ವ ವಿದ್ಯಾಲಯ ಪ್ರತಿನಿಧಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ವಿದೇಶದಲ್ಲಿ ಅಧ್ಯಯನ ಮಾಡುವ ಕನಸು ಹೊತ್ತ ಸಾವಿರಾರು ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ವಿಶ್ವವಿದ್ಯಾಲಯದ ಪ್ರತಿನಿಧಿಗಳ ಜತೆಗಿನ ಸಂವಾದದ ಹೊರತಾಗಿ, ಅನೇಕ ವಿದ್ಯಾರ್ಥಿಗಳು ಶಿಕ್ಷಣ ಸಾಲ ಸೌಲಭ್ಯಗಳನ್ನು ಬಗ್ಗೆ ಮಾಹಿತಿ ಪಡೆಯಲು ಉತ್ಸುರಾಗಿದ್ದರು. ಉನ್ನತ ಶಿಕ್ಷಣದ ಆಕಾಂಕ್ಷಿಗಳಿಗಾಗಿ ಇರುವ ವಿಶೇಷ ಸಾಲ ಸೌಲಭ್ಯದ ಆಯ್ಕೆಗಳನ್ನು ಕರ್ನಾಟಕ ಬ್ಯಾಂಕ್ ಪ್ರತಿನಿಧಿಗಳು ವಿವರಿಸಿದರು.

ಹಲವಾರು ವಿಶ್ವ ವಿದ್ಯಾಲಯಗಳು ಎಕ್ಸ್‌ಪೋ ದಲ್ಲೇ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನವನ್ನು ಘೋಷಿಸಿದವು. ವಿಶ್ವದ ಅಗ್ರ 100 ವಿವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾಲಯವು(ಯುಡಬ್ಲ್ಯುಎ) ಪದವಿಪೂರ್ವ ವಿದ್ಯಾರ್ಥಿಗಳಿಗೆ 48 ಸಾವಿರ ಆಸ್ಟ್ರೇಲಿಯಾ ಡಾಲರ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 24 ಸಾವಿರ ಆಸ್ಟ್ರೇಲಿಯಾ ಡಾಲರ್‍ವರೆಗೆ ವಿದ್ಯಾರ್ಥಿವೇತನವನ್ನು ಘೋಷಿಸಿದೆ.

ಯನಿರ್ವಸಿಟಿ ಆಫ್ ಈಸ್ಟ್ ಆಂಗ್ಲಿಯಾ, ಬ್ಯಾಂಗೋರ್ ಯೂನಿವರ್ಸಿಟಿ ತಲಾ ಇಬ್ಬರಿಗೆ ಶೇ.50 ವಿದ್ಯಾರ್ಥಿ ವೇತನವನ್ನು ಘೋಷಿಸಿದವು. ‘ಈ ಎಕ್ಸ್‌ಪೋ ದಲ್ಲಿ ಭಾಗಿಯಾಗಿದ್ದರಿಂದ ವಿದೇಶದಲ್ಲಿರುವ ಶೈಕ್ಷಣಿಕ ಅವಕಾಶಗಳು ಹಾಗೂ ಆಯ್ಕೆಗಳ ಬಗ್ಗೆ ನನಗೆ ಸ್ಪಷ್ಟತೆ ಸಿಕ್ಕಿತು’ ಎಂದು ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಲಕ್ಷ್ಮಿ ಹೇಳಿದರು.

ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಕೆವಿಟಿಎಸ್‍ಡಿಸಿ ಅಧ್ಯಕ್ಷೆ ಶಿವಕಾಂತಮ್ಮ ನಾಯಕ್ ಸೇರಿದಂತೆ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News