×
Ad

ಸಬ್ ಅರ್ಬನ್ ರೈಲ್ವೆ ಯೋಜನೆಯ ಮೊದಲ ಮಾರ್ಗ 2026ಕ್ಕೆ ಪೂರ್ಣವಾಗುವುದು ಕಷ್ಟ: ವಿ.ಸೋಮಣ್ಣ

Update: 2025-08-29 23:00 IST

ಬೆಂಗಳೂರು, ಆ.29: ಬೆಂಗಳೂರು ಉಪನಗರ(ಸಬ್ ಅರ್ಬನ್) ರೈಲ್ವೆ ಯೋಜನೆ ಮೊದಲ ಮಾರ್ಗದ ಕಾಮಗಾರಿ 2026ಕ್ಕೆ ಪೂರ್ಣವಾಗುವುದು ಕಷ್ಟಸಾಧ್ಯ ಎಂದು ಕೇಂದ್ರದ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಶುಕ್ರವಾರ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಬೆಂಗಳೂರಿನ ಹೊರವಲಯದ ಆರ್‌ಯುಬಿ/ ಆರ್‌ಓಬಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗುರಿಯಂತೆ 2026ರಲ್ಲಿ ಸಬ್ ಅರ್ಬನ್ ಯೋಜನೆಯ ಮೊದಲ ಮಾರ್ಗ ಪೂರ್ಣಗೊಳ್ಳುವುದು ಕಷ್ಟ ಸಾಧ್ಯ. ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಯ ನಾಲ್ಕು ಮಾರ್ಗಗಳ ಕಾಮಗಾರಿ ಪ್ರಗತಿಯಲ್ಲಿದೆ. ನಾಲ್ಕು ಮಾರ್ಗಗಳ ಸಬ್ ಅರ್ಬನ್ ಯೋಜನೆಯಲ್ಲಿ ಎರಡು ಮಾರ್ಗಗಳ ಕಾಮಗಾರಿ ಕುಟುಂತ್ತಾ ಸಾಗಿದೆ. ಭೂ ಸ್ವಾಧೀನ ಸಮಸ್ಯೆಯಿಂದ ವಿಳಂಬವಾಗುತ್ತಿದೆ. ಎಲ್ ಅಂಡ್ ಟಿ ಸಂಸ್ಥೆ ಗುತ್ತಿಗೆಯಿಂದ ಹಿಂದೆ ಸರಿದಿದೆ. ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ರೈಲ್ವೆ ಇಲಾಖೆ ಸುಪರ್ದಿಗೆ ಚಿಂತನೆ: ಸಬ್ ಅರ್ಬನ್ ರೈಲ್ವೆ ಯೋಜನೆ ಅನುಷ್ಠಾನ ಜವಾಬ್ದಾರಿಯನ್ನು ಕೆ-ರೈಡ್‍ನಿಂದ ರೈಲ್ವೆ ಇಲಾಖೆ ಸುಪರ್ದಿಗೆ ಕೊಡುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಸಿಎಸ್ ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜೊತೆ ಸಭೆ ಮಾಡಲಿದ್ದೇನೆ. 15-20 ದಿನದೊಳಗೆ ಸಚಿವರ ಜೊತೆ ಸಭೆ ನಡೆಸಿ, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ವಿ.ಸೋಮಣ್ಣ ಸ್ಪಷ್ಟಪಡಿಸಿದರು.

ದೇವನಹಳ್ಳಿ ಬಳಿ ಮೆಗಾ ಕೋಚಿಂಗ್ ಟರ್ಮಿನಲ್: ದೇವನಹಳ್ಳಿ ಬಳಿ ರೈಲ್ವೆ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣವಾಗಲಿದೆ. ಇದು ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು, ಹೊಸ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಮತ್ತು ವಿಮಾನ ನಿಲ್ದಾಣಕ್ಕೆ ಉತ್ತಮ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣಕ್ಕೆ ಅಂತಿಮ ಸ್ಥಳ ಗುರುತಿಸುವ ಕೆಲಸ ಅಂತಿಮ ಹಂತದಲ್ಲಿದೆ ಎಂದು ವಿ.ಸೋಮಣ್ಣ ತಿಳಿಸಿದರು.

1,370 ಕೋಟಿ ರೂ. ವೆಚ್ಚದಲ್ಲಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವನ್ನು ನವೀಕರಣ ಮಾಡಲಾಗುವುದು. ಈಗಾಗಲೇ 222 ಕೋಟಿ ಅನುದಾನದಲ್ಲಿ ಹೆಚ್ಚುವರಿ ಫ್ಲಾಟ್ ಫಾರ್ಮ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. 2025ರೊಳಗೆ ಕಾಮಗಾರಿ ಮುಗಿಸಲಾಗುತ್ತದೆ. ಯಶವಂತಪುರದ ರೈಲ್ವೆ ನಿಲ್ದಾಣದಲ್ಲಿ 450 ಕೋಟಿ ವೆಚ್ಚದಲ್ಲಿ ಆಧುನೀಕರಣ ಕಾರ್ಯ ನಡೆಯುತ್ತಿದೆ ಎಂದು ವಿ.ಸೋಮಣ್ಣ ವಿವರಿಸಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News