6 ದಿನಕ್ಕೆ ಕಾಲಿಟ್ಟ ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಧರಣಿ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಆ.15: ನ್ಯಾ.ಎಚ್.ಎನ್.ನಾಗಮೋಹನ್‍ದಾಸ್ ಏಕಸದಸ್ಯ ಆಯೋಗದ ವರದಿಯಂತೆ ಕೂಡಲೇ ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ.
ಸ್ವಾತಂತ್ರ್ಯ ದಿನಾಚರಣೆಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕುವ ತೀರ್ಮಾನವನ್ನು ಒಳಮೀಸಲಾತಿ ಹೋರಾಟಗಾರರು ತೆಗೆದುಕೊಂಡಿದ್ದರು. ಅದರಂತೆ 15 ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಮುತ್ತಿಗೆ ಹಾಕಿ ಒಳಮೀಸಲಾತಿ ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಣಾಯಕ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ. ಜತೆಗೆ ಫ್ರೀಡಂ ಪ್ರತಿಭಟನೆ ಮುಂದುವರಿದಿದೆ ಎಂದು ಹೋರಾಟಗಾರ ಚಂದ್ರು ತರಹುಣಿಸೆ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮುತ್ತಿಗೆ ಹಾಕಿದ ಒಳಮೀಸಲಾತಿ ಹೋರಾಟಗಾರರನ್ನು ಪೋಲೀಸರು ಬಂಧಿಸಿದ್ದಾರೆ. ಅನೇಕ ಜಿಲ್ಲಾ ಉಸ್ತುವಾರಿ ಸಚಿವರು ಮನವಿಗೆ ಸ್ಪಂಧಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಕುರಿತು ನಿರ್ಣಯ ಕೈಗೊಳ್ಳುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ತಿಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.