ಬೆಂಗಳೂರು | ಸುತ್ತಿಗೆ ಹಿಡಿದು ಕಂಡ ಕಂಡವರ ಮೇಲೆ ಹಲ್ಲೆಗೆ ಯತ್ನ: ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೈಯಲ್ಲಿ ಸುತ್ತಿಗೆ ಹಿಡಿದು ರಸ್ತೆಯಲ್ಲಿ ಕಂಡ ಕಂಡವರ ಮೇಲೆ ಹಲ್ಲೆಗೆ ಯತ್ನಿಸುತ್ತಿದ್ದ ಕಿಡಿಗೇಡಿಯೊಬ್ಬನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಅ.6ರ ತಡರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.
ರಾಜಾಜಿನಗರದ ನವರಂಗ್ ಸರ್ಕಲ್ ಬಳಿ ಅ.6ರ ತಡರಾತ್ರಿ 11:45ರ ಸುಮಾರಿಗೆ ಘಟನೆ ನಡೆದಿದ್ದು, ಶಹಾಬುದ್ದೀನ್ ಎಂಬ ಆರೋಪಿಯನ್ನು ಸ್ಥಳೀಯರೇ ಹಿಡಿದು ಸುಬ್ರಹ್ಮಣ್ಯನಗರ ಠಾಣೆಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಶಹಾಬುದ್ದೀನ್ ಕೈಯಲ್ಲಿ ಸುತ್ತಿಗೆ ಹಿಡಿದು ರಸ್ತೆಗಿಳಿದಿದ್ದ. ಇದೇ ವೇಳೆ ದ್ವಿಚಕ್ರ ವಾಹನ ನಿಲ್ಲಿಸಿ ರಸ್ತೆ ಬದಿ ನಿಂತಿದ್ದ ಡೆಲಿವರಿ ಬಾಯ್ ಮೇಲೆ ಸುತ್ತಿಗೆ ಬೀಸಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.
ಆರೋಪಿಯ ಪುಂಡಾಟವನ್ನು ಗಮನಿಸಿ ಒಂದೆಡೆ ಸೇರಿದ ಸ್ಥಳೀಯರು ಸುತ್ತಿಗೆ ಸಮೇತ ಆತನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು, ಆರೋಪಿ ಶಹಾಬುದ್ದೀನ್‍ನನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.