ಬೆಂಗಳೂರು | ಕಸದ ರಾಶಿಯಲ್ಲಿ ಮನುಷ್ಯನ ಮೂಳೆಗಳು ಪತ್ತೆ!
Update: 2025-08-26 19:18 IST
ಬೆಂಗಳೂರು, ಆ.26 : ನಗರದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೋವಿಂದಶೆಟ್ಟಿಪಾಳ್ಯದಲ್ಲಿ ಕಸದ ರಾಶಿಯಲ್ಲಿ ಮನುಷ್ಯನ ಮೂಳೆಗಳು ಪತ್ತೆಯಾಗಿರುವ ಘಟನೆ ಮಂಗಳವಾರ ವರದಿಯಾಗಿದೆ.
ಗೋವಿಂದಶೆಟ್ಟಿಪಾಳ್ಯದ ಗಣೇಶ ದೇವಸ್ಥಾನದ ಬಳಿ ಮನುಷ್ಯನ ಮೂಳೆಗಳು ಪತ್ತೆಯಾಗಿವೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಭೇಟಿ ಪರಿಶೀಲನೆಗೆ ತೊಡಗಿದ್ದಾಗ ಅಲ್ಲಿಗೆ ಬಂದ ಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ತಂದೆಯು ತಪ್ಪೊಪ್ಪಿಕೊಂಡಿದ್ದು, ಮೂಳೆಗಳನ್ನು ತಾನೇ ತಂದು ಹಾಕಿರುವುದಾಗಿ ಹೇಳಿಕೆ ನೀಡಿದ್ದಾರೆಂದು ತಿಳಿದುಬಂದಿದೆ.
ಮೆಡಿಕಲ್ ಓದುತ್ತಿದ್ದ ಮಗಳ ವಿದ್ಯಾಭ್ಯಾಸಕ್ಕಾಗಿ ಮೂಳೆಗಳನ್ನು ಮನೆಗೆ ತಂದಿದ್ದರು. ಅವಶ್ಯಕತೆ ಇಲ್ಲದೆ ಕೆಲ ದಿನಗಳಿಂದ ಮನೆಯಲ್ಲೇ ಇಟ್ಟಿದ್ದರು. ಆದರೆ, ಗೌರಿ-ಗಣೇಶ ಹಬ್ಬದ ಹಿನ್ನೆಲೆ ಮನೆ ಸ್ವಚ್ಛಗೊಳಿಸುವ ಸಂಬಂಧ ಮೂಳೆಗಳನ್ನು ತಂದು ಕಸ ಹಾಕುವ ಜಾಗದಲ್ಲಿ ಬಿಸಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.