ಬೆಂಗಳೂರು| ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಪದಗಳಿಂದ ನಿಂದನೆ ಆರೋಪ : ಇಬ್ಬರ ಬಂಧನ
ಬೆಂಗಳೂರು, ಆ.16 : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದಡಿ ಮಹಿಳೆ ಸೇರಿ ಇಬ್ಬರನ್ನು ಇಲ್ಲಿನ ಯಲಹಂಕ ನ್ಯೂಟೌನ್ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಯಲಹಂಕ ಸಂಚಾರ ಠಾಣೆಯ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಬಿ.ಜಿ.ನಿರ್ಮಲಾ ಎಂಬವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಮುಹಮ್ಮದ್ ಸರ್ಬಾಸ್ ಮತ್ತು ಹಿರಲ್ ವ್ಯಾಸ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿ.ಜಿ.ನಿರ್ಮಲಾ ಅವರು ಆ.14ರಂದು ಬೆಳಗ್ಗೆ ತಮ್ಮ ಸಿಬ್ಬಂದಿಯೊಂದಿಗೆ ಯಲಹಂಕ ಉಪನಗರದ ಶೇಷಾದ್ರಿಪುರ ಕಾಲೇಜಿನ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಧ್ಯಾಹ್ನ 12.30ಕ್ಕೆ ಬುಲೆಟ್ ವಾಹನವನ್ನು ನೋ ಪಾರ್ಕಿಂಗ್ ನಿಲ್ಲಿಸಲಾಗಿತ್ತು. ಹೀಗಾಗಿ ಅದಕ್ಕೆ ಪೊಲೀಸರು ವ್ಹೀಲ್ ಕ್ಲಾಂಪ್ ಹಾಕಿದ್ದರು.
ನಂತರ ಅಲ್ಲಿಗೆ ಬಂದ ವಾಹನದ ಮಾಲಕ ಮುಹಮ್ಮದ್ ಸರ್ಬಾಸ್‍ಗೆ ನೋ ಪಾರ್ಕಿಂಗ್ ದಂಡ ಕಟ್ಟುವಂತೆ ಪೊಲೀಸರು ತಿಳಿಸಿದರು. ಆತ ಏರುಧ್ವನಿಯಲ್ಲಿ ಮಾತನಾಡಿದ್ದ. ‘ದಂಡ ಕಟ್ಟುವುದಿಲ್ಲ. ದಂಡ ಕಟ್ಟಲು ಹಣವಿಲ್ಲ. ನೋ ಪಾರ್ಕಿಂಗ್ ಬೋರ್ಡು ಹಾಕಿದ್ದೀರಾ? ನಾನು ವಾಹನ ನಿಲ್ಲಿಸುವಾಗ ನೀವು ವಿಜಲ್ ಹಾಕಿ ಓಡಿಸಬೇಕಿತ್ತು’ ಎಂದು ವಾಗ್ವಾದ ಮಾಡಿ ಕರ್ತವ್ಯಕ್ಕೆ ಅಡ್ಡಪಡಿಸಿದ್ದ. ನಂತರ ಮಹಿಳೆಯೊಬ್ಬರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದ ಎಂದು ಎಫ್‍ಐಆರ್‍ನಲ್ಲಿ ತಿಳಿಸಲಾಗಿದೆ.
ಸ್ವಲ್ಪ ಹೊತ್ತಿನ ಬಳಿಕ ಸ್ಥಳಕ್ಕೆ ಬಂದ ಮಹಿಳೆ ಹಿರಲ್ ವ್ಯಾಸ್ ಎಂಬಾಕೆ ತಂದಿದ್ದ ದ್ವಿಚಕ್ರ ವಾಹನವನ್ನು ಮುಹಮ್ಮದ್ ಸರ್ಬಾನ್‍ಗೆ ಕೊಟ್ಟು ಇಲ್ಲಿಂದ ಓಡಿ ಹೋಗುವಂತೆ ಹೇಳಿದ್ದಾಳೆ. ಆಗ, ಟ್ರಾಫಿಕ್ ಪೊಲೀಸರು ದಂಡ ಪಾವತಿಸಿ ಹೋಗುವಂತೆ ಹೇಳಿದ್ದಾರೆ. ಆದರೆ, ಹಿರಲ್ ವ್ಯಾಸ್ ಕರ್ತವ್ಯದಲ್ಲಿದ್ದ ನಿರ್ಮಲಾ ಮತ್ತು ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ, ಅಸಭ್ಯವಾಗಿ ಕೈ ಸನ್ನೆ ಮಾಡಿ ಅವಮಾನ ಮಾಡಿದ್ದಾರೆ ಎಂದು ಎಫ್‍ಐಆರ್‍ನಲ್ಲಿ ವಿವರಿಸಲಾಗಿದೆ.