×
Ad

ಬೆಂಗಳೂರು | ಮಾದಕ ವಸ್ತು ಮಾರಾಟ ದಂಧೆ ಪ್ರಕರಣ: ಇಬ್ಬರ ಬಂಧನ

Update: 2025-08-19 17:45 IST

ಸಾಂದರ್ಭಿಕ ಚಿತ್ರ | PC : Meta AI

ಬೆಂಗಳೂರು, ಆ.19: ವಿದ್ಯಾರ್ಥಿ ವೀಸಾದಡಿ ಬಂದು ಮಾದಕ ಪದಾರ್ಥ ಮಾರಾಟ ದಂಧೆಯಲ್ಲಿ ತೊಡಗಿದ್ದ ಪ್ರಕರಣದಡಿ ಇಬ್ಬರು ಆರೋಪಿಗಳನ್ನು ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಆಫ್ರಿಕಾ ಮೂಲದ ಜೋಯಲ್ ಕಾಬೊಂಗ್ ಹಾಗೂ ಆತನ ಸ್ನೇಹಿತೆ ಜೋಯ್ ಸಂಡೆ ಎಂಬಾಕೆಯನ್ನು ಬಂಧಿಸಲಾಗಿದ್ದು, ಬರೋಬ್ಬರಿ 5 ಕೋಟಿ ರೂ. ಮೌಲ್ಯದ 2 ಕೆ.ಜಿ. 150 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್ಸ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಜೋಯಲ್ ಕಾಬೊಂಗ್ 12 ವರ್ಷಗಳ ಹಿಂದೆ ಸ್ಟೂಡೆಂಟ್ ವೀಸಾದಡಿ ಭಾರತಕ್ಕೆ ಬಂದಿದ್ದ. ಜೋಯ್ ಸಂಡೆ ಸಹ ಸ್ಟೂಡೆಂಟ್ ವೀಸಾ ಪಡೆದು 3 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಳು. ಇಬ್ಬರ ವೀಸಾ ಅವಧಿ ಅಂತ್ಯವಾದ ಬಳಿಕವೂ ಭಾರತದಲ್ಲಿ ಉಳಿದುಕೊಂಡು ಮಾದಕ ಪದಾರ್ಥಗಳ ಮಾರಾಟ ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಗಸ್ಟ್ 15ರಂದು ಬೆಟ್ಟದಾಸನಪುರ ಬಳಿ ಗಿರಾಕಿಗಳಿಗೆ ಎಂಡಿಎಂಎ ಮಾರಾಟ ಮಾಡಲು ನಿಂತಿದ್ದ ಜೋಯಲ್ ಕಾಬೊಂಗ್‍ನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದರು. ಬಳಿಕ ಆತ ನೀಡಿದ ಮಾಹಿತಿ ಆಧರಿಸಿ ಅದೇ ದಿನ ಆತನ ಸ್ನೇಹಿತೆ ಜೋಯ್ ಸಂಡೆಯನ್ನು ಬಂಧಿಸಿದ್ದರು. ಆರೋಪಿಗಳಿಗೆ ಕಡಿಮೆ ಬೆಲೆಗೆ ಎಂಡಿಎಂಎ ಸರಬರಾಜು ಮಾಡುತ್ತಿದ್ದ ಮತ್ತೋರ್ವ ಆರೋಪಿ ದಿಲ್ಲಿಗೆ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News