ಕೇಸರಿ ಟವೆಲ್ ಧರಿಸಿದ್ದ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ: ಕಲಾಸಿಪಾಳ್ಯ ಪೊಲೀಸರಿಂದ ಮೂವರ ಬಂಧನ
ಸಾಂದರ್ಭಿಕ ಚಿತ್ರ | PC : Meta AI
ಬೆಂಗಳೂರು, ಆ.26: ಕೇಸರಿ ಟವೆಲ್ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾರ್ಮಿಕನ ಮೇಲೆ ಹಲ್ಲೆಗೈದ ಪ್ರಕರಣದಡಿ ಮೂವರು ಆರೋಪಿಗಳನ್ನು ಇಲ್ಲಿನ ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ತಬ್ರೇಝ್(30), ಇಮ್ರಾನ್ ಖಾನ್(35) ಹಾಗೂ ಅಝೀಝ್ ಖಾನ್(37) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆಗಸ್ಟ್ 24ರಂದು ರಾತ್ರಿ 9.30ರ ಸುಮಾರಿಗೆ ಕಲಾಸಿಪಾಳ್ಯದ ಎ.ವಿ.ರಸ್ತೆಯ ರಾಯಲ್ ಟ್ರಾವೆಲ್ಸ್ ಕಂಪೆನಿಯ ಕಾರ್ಮಿಕ ಸ್ಲಿಂದರ್ ಕುಮಾರ್ ಹಾಗೂ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಇನ್‍ಚಾರ್ಜ್ ಹರಿಕೃಷ್ಣ ಎಂಬುವವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ಕೂಲಿ ಕೆಲಸ ಮಾಡುತ್ತಿದ್ದ ಸ್ಲಿಂದರ್ ಕುಮಾರ್ ಬಳಿ ಬಂದಿದ್ದ ಆರೋಪಿಗಳು ‘ಯಾಕೆ ಕೇಸರಿ ಟವೆಲ್ ಹಾಕಿದ್ದೀಯಾ?' ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಇನ್‍ಚಾರ್ಜ್ ಹರಿಕೃಷ್ಣ ಅವರು ಪ್ರಶ್ನಿಸಿದಾಗ ಅವರಿಗೂ ಅವಾಚ್ಯವಾಗಿ ನಿಂದಿಸಿ, ಹಲ್ಲೆಗೈದಿದ್ದರು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಹರಿಕೃಷ್ಣ ನೀಡಿದ ದೂರಿನನ್ವಯ ಕಲಾಸಿಪಾಳ್ಯ ಠಾಣೆಯಲ್ಲಿ ಮೊದಲು ಎನ್‍ಸಿಆರ್(ನಾನ್-ಕಾಗ್ನಿಜಬಲ್ ರಿಪೋರ್ಟ್) ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಎಫ್‍ಐಆರ್ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ.