ಬೆಂಗಳೂರು | 1.1 ಕೋಟಿ ನಗದು ದೋಚಿದ ಪ್ರಕರಣ : 8 ಮಂದಿ ಬಂಧನ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ದಂಪತಿ ಹಾಗೂ ಕಾರು ಚಾಲಕನನ್ನು ಅಪಹರಿಸಿ ಹಲ್ಲೆ ಮಾಡಿ 1.1 ಕೋಟಿ ನಗದನ್ನು ದೋಚಿದ್ದ ಪ್ರಕರಣದಡಿ 8 ಮಂದಿ ಆರೋಪಿಗಳನ್ನು ಇಲ್ಲಿನ ಹುಳಿಮಾವು ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಸೆ.27ರ ಸಂಜೆ ಆರ್.ಆರ್.ನಗರದ ಅಡಿಕೆ ವ್ಯಾಪಾರಿ ಮೋಹನ್ ಎಂಬುವರು ತಮ್ಮ ಕಾರು ಚಾಲಕ ಹೇಮಂತ್‍ಗೆ ಎಲೆಕ್ಟ್ರಾನಿಕ್ ಸಿಟಿಗೆ ಹೋಗಿ ಹಣ ತರುವಂತೆ ತಿಳಿಸಿದ್ದಾರೆ. ಅದರಂತೆ ಹೇಮಂತ್ ಅವರು ಸಂಜೆ 6 ಗಂಟೆಗೆ ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯನಗರದ ಅಕ್ಷಯ ಪಾರ್ಕ್ ಬಳಿ ತೆರಳಿ ಮಾಲಕರು ನೀಡಿದ್ದ ಮೊಬೈಲ್ ನಂಬರಿಗೆ ಕರೆ ಮಾಡಿದ್ದಾರೆ.
ನಂತರ ಕರೆ ಸ್ವೀಕರಿಸಿದ ರಿಯಲ್ ಎಸ್ಟೇಟ್ ಉದ್ಯಮಿ ಮೋಟರಾಮ್ ಅವರು ತಮ್ಮ ಪತ್ನಿಯೊಂದಿಗೆ ಕಾರಿನಲ್ಲಿ ಹೇಮಂತ್ ಇದ್ದ ಸ್ಥಳಕ್ಕೆ ಹೋಗಿದ್ದಾರೆ. ನಂತರ ಅವರೊಂದಿಗೆ ಸಂಭಾಷಣೆ ನಡೆಸಿ ಕಾರಿನ ಹಿಂಬದಿಯಲ್ಲಿ ಹಣ ಇರುವುದಾಗಿ ತಿಳಿಸಿದ್ದಾರೆ. ಈ ವೇಳೆ ನಾಲ್ಕೈದು ಆರೋಪಿಗಳು ಏಕಾಏಕಿ ಕಾರಿನ ಬಳಿ ಬಂದು ನಿಮ್ಮನ್ನು ತಪಾಸಣೆ ಮಾಡಬೇಕು. ಕೆಳಗೆ ಇಳಿಯಿರಿ ವಿಡಿಯೋ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ವೇಳೆ ದಂಪತಿ ಅವರನ್ನು ಪ್ರಶ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ದಂಪತಿ ಹಾಗೂ ಕಾರು ಚಾಲಕ ಹೇಮಂತ್‍ನನ್ನು ಆರೋಪಿಗಳು ಅಪಹರಿಸಿ ಮಾಡಿ 1.1 ಕೋಟಿ ನಗದನ್ನು ದೋಚಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ವಿವಿಧ ಮಾದರಿಯಲ್ಲಿ ಕ್ಷಿಪ್ರವಾಗಿ ತನಿಖೆ ನಡೆಸಿದ ಹುಳಿಮಾವು ಠಾಣೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ 8 ಮಂದಿಯನ್ನು ಬಂಧಿಸಿ ಕ್ರಮ ಜರುಗಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.