ಬೆಂಗಳೂರು | ಸಿಜೆಐ ಗವಾಯಿಯವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು : ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯಾಯಾಂಗದ ಪೀಠದತ್ತ ಶೂ ಎಸೆದು ದಾಳಿ ಮಾಡಲು ಯತ್ನಿಸಿರುವ ವಕೀಲ ರಾಕೇಶ್ ಕಿಶೋರ್ ಎಂಬ ವ್ಯಕ್ತಿಯ ಕೃತ್ಯವು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಡೆದ ನೇರ ಹಲ್ಲೆಯಾಗಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಬೆಂಗಳೂರಿನ ಆನಂದರಾವ್ ವೃತ್ತದ ಬಳಿಯಿರುವ ಕಾಂಗ್ರೆಸ್ ಭವನದ ಸಮೀಪ ಪ್ರತಿಭಟನೆ ನಡೆಸಿ ಮಾತನಾಡಿದ ಕಾಂಗ್ರೆಸ್ ನಾಯಕರು, ಈ ಘಟನೆ ದೇಶದ ನ್ಯಾಯಾಂಗದ ಗೌರವವನ್ನು ಮಸಕುಗೊಳಿಸಿರುವ ಕರಾಳ ದಿನ ಎಂದು ತಿಳಿಸಿರುವ ಅವರು, ಇಂತಹ ಹೀನಾಯ ಕೃತ್ಯ ಎಸಗಿದ ವ್ಯಕ್ತಿಯನ್ನು ಬಂಧಿಸಿದರೂ, ತಕ್ಷಣ ಬಿಡುಗಡೆ ಮಾಡಿರುವುದು ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ರವರ ಮೇಲೆ ನಡೆದ ಈ ಕೃತ್ಯವು ಕೇವಲ ಅವರ ವಿರುದ್ಧವಲ್ಲ, ಇಡೀ ದೇಶದ ನ್ಯಾಯಾಂಗ ವ್ಯವಸ್ಥೆ ಹಾಗೂ ಪ್ರತಿಯೊಬ್ಬ ನಾಗರಿಕರ ವಿರುದ್ಧದ ಅಪಮಾನವಾಗಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಗೃಹ ಸಚಿವರಾಗಿರುವ ಅಮಿತ್ ಶಾ ಮೌನ ವಹಿಸಿರುವುದು ಸನಾತನ ಧರ್ಮವನ್ನು ಬೆಂಬಲಿಸುತ್ತಿರುವಂತೆ ತೋರುತ್ತಿದೆ. ಇದರಿಂದ ಇವರ ಹೀನಾಯ ಮನಸ್ಥಿತಿ ಏನೆಂಬುದು ಈಗ ಪ್ರತಿಯೊಬ್ಬ ಭಾರತೀಯರಿಗೂ ಅರಿವಾಗುತ್ತಿದೆ ಎಂದು ಅವರು ಆರೋಪಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಘಟನೆಯನ್ನು ಖಂಡಿಸಿದರೂ, ಆರೋಪಿ ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸದಿರುವುದು ಖೇದಕರ ಎಂದು ಕಾಂಗ್ರೆಸ್ ನಾಯಕರು ಹೇಳಿದರು.
ವಾಮಮಾರ್ಗದಲ್ಲಿ ಸನಾತನ ಧರ್ಮವನ್ನು ಬೆಂಬಲಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ, ಇಂತಹ ಅಸಂವಿಧಾನಿಕ ಕೃತ್ಯವನ್ನು ಪರೋಕ್ಷವಾಗಿ ಉತ್ತೇಜಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು.
ಕಾಂಗ್ರೆಸ್ ನಾಯಕರು, ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ನಿರ್ಧಾರ ಮತ್ತು ನೈತಿಕತೆಯನ್ನು ಬೆಂಬಲಿಸುತ್ತಾ, ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಈತನ ಹಿಂದೆ ಇರುವ ಶಕ್ತಿಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಕೇಶ್ ಕಿಶೋರ್ ಅವರ ಭಾವಚಿತ್ರವನ್ನು ಹರಿದು ಹಾಕಿ ಖಂಡನೆ ವ್ಯಕ್ತಪಡಿಸಲಾಯಿತು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್, ಕಾಂಗ್ರೆಸ್ ಮುಖಂಡರಾದ ಸುಧಾಕರ್ ರಾವ್, ಪ್ರಕಾಶ್, ಹೇಮರಾಜ್, ಕುಶಾಲ್ ಹಾರುವೇಗೌಡ್ರು, ಪುಟ್ಟರಾಜು, ಉಮೇಶ್,ನವೀನ್ ಸುಂಕದಕಟ್ಟೆ, ಚಿನ್ನಿ ಪ್ರಕಾಶ್, ಓಬಳೇಶ್, ಆನಂದ್, ಪ್ರವೀಣ್, ಪವನ್, ಅಜಯ್, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು