ಬೆಂಗಳೂರು| ದಾಖಲೆಗಳಿಲ್ಲದೆ ವಿದೇಶಿಗರಿಗೆ ಬಾಡಿಗೆ ಮನೆ ನೀಡಿದ ಆರೋಪ: 23 ಮಾಲಕರ ವಿರುದ್ಧ ಎಫ್‍ಐಆರ್
ಸಾಂದರ್ಭಿಕ ಚಿತ್ರ (Grok)
ಬೆಂಗಳೂರು: ಅಗತ್ಯ ದಾಖಲೆಗಳಿಲ್ಲದೇ ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆಗೆ ನೀಡಿದ್ದ ಆರೋಪದ ಮೇಲೆ 23 ಮನೆ ಮಾಲಕರ ವಿರುದ್ಧ ಬೆಂಗಳೂರು ಈಶಾನ್ಯ ವಿಭಾಗದ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಯಾವುದೇ ದಾಖಲಾತಿಗಳನ್ನು ಪಡೆದುಕೊಳ್ಳದ ಹಾಗೂ ಸಿ ಫಾರ್ಮ್ ಸಲ್ಲಿಸದ ಮನೆಯ ಮಾಲಕರ ವಿರುದ್ಧ ರಿಜಿಸ್ಟ್ರೇಷನ್ ಆಫ್ ಫಾರಿನರ್ಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈಶಾನ್ಯ ವಿಭಾಗದ ಅಮೃತಹಳ್ಳಿ, ಬಾಗಲೂರು, ಸಂಪಿಗೆಹಳ್ಳಿ, ವಿದ್ಯಾರಣ್ಯಪುರ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು, ಚಿಕ್ಕಜಾಲ ಹಾಗೂ ಕೊಡಿಗೆಹಳ್ಳಿಯಲ್ಲಿ ತಲಾ ಎರಡು, ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಮೂರು, ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಐದು, ಯಲಹಂಕ ಪೊಲೀಸ್ ಠಾಣೆಯಲ್ಲಿ ಏಳು ಪ್ರಕರಣಗಳು ದಾಖಲಾಗಿವೆ. ಅನೇಕ ಕಡೆಗಳಲ್ಲಿ ವೀಸಾ ಅವಧಿ ಅಂತ್ಯವಾದ ಬಳಿಕ ಅಕ್ರಮವಾಗಿ ವಿದೇಶಿ ಪ್ರಜೆಗಳು ನಗರದಲ್ಲಿ ನೆಲಸಿರುವುದು ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಸಿ-ಫಾರ್ಮ್ ಸಲ್ಲಿಕೆ ಕಡ್ಡಾಯ:
ಭಾರತೀಯ ವಿದೇಶಿಗರ ಕಾಯ್ದೆಯ ಅನುಸಾರ ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆಗೆ ನೀಡುವಾಗ ಮಾಲಕರು ಅಥವಾ ಆ ಮನೆಗಳನ್ನು ನಿರ್ವಹಿಸುತ್ತಿರುವವರು ಆ ಪ್ರಜೆಗಳ ವಿವರಗಳನ್ನು (ಪಾಸ್ ಪೋರ್ಟ್, ವೀಸಾ ಇತರ) 24 ಗಂಟೆಗೊಳಗಾಗಿ Indianfrro.gov.in ನಲ್ಲಿ ಸಲ್ಲಿಸಬೇಕು.
ನಂತರ ಎಫ್‍ಆರ್‍ಆರ್‍ಓನಿಂದ ಸಿ-ಫಾರ್ಮ್ ಪಡೆದು ಸ್ಥಳಿಯ ಠಾಣೆಗೆ ಸಲ್ಲಿಸಬೇಕಿರುವುದು ಕಡ್ಡಾಯ. ಈ ಕಾಯ್ದೆಯನ್ನು ಉಲ್ಲಂಘಿಸುವ ಮನೆ ಮಾಲಕರ ವಿರುದ್ಧ ಬೆಂಗಳೂರಿನಲ್ಲಿ (2025ರ ಮಾರ್ಚ್‍ವರೆಗೂ) 70 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಆ ಪೈಕಿ 42 ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, 26 ಪ್ರಕರಣಗಳು ತನಿಖಾ ಹಂತದಲ್ಲಿವೆ. ಮತ್ತು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.