×
Ad

ಬೆಂಗಳೂರು | ಮನೆಯಲ್ಲಿ ನಿಗೂಢ ಸ್ಫೋಟ : ವೃದ್ಧೆ ಮೃತ್ಯು, ಮೂವರಿಗೆ ಗಂಭೀರ ಗಾಯ

Update: 2025-10-25 12:02 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಇಲ್ಲಿನ ಕೆ.ಆರ್.ಪುರದ ತ್ರಿವೇಣಿ ನಗರದ ಮನೆಯೊಂದರಲ್ಲಿ ಶನಿವಾರ ಬೆಳಗ್ಗೆ 7.15ರ ಸುಮಾರಿಗೆ ಸಂಭವಿಸಿದ ನಿಗೂಢ ಸ್ಫೋಟದ ಪರಿಣಾಮ ಅಕ್ಕಯ್ಯಮ್ಮ(80) ಎಂಬ ವೃದ್ಧೆ ಮೃತಪಟ್ಟಿದ್ದು, ಚಂದನಾ(22), ಶೇಖರ್(52) ಮತ್ತು ಕಿರಣ್ ಕುಮಾರ್(25) ಎಂಬವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಮನೆಯಲ್ಲಿದ್ದ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆರ್‍ಸಿಸಿ ಮೇಲ್ಛಾವಣಿಯ ಮನೆ ಸಂಪೂರ್ಣ ಕುಸಿದಿದ್ದು, ಅಕ್ಕಪಕ್ಕದ ಮೂರ್ನಾಲ್ಕು ಮನೆಗಳಿಗೂ ಹಾನಿಯಾಗಿದೆ. ಕೆ.ಆರ್.ಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅಕ್ಕಯ್ಯಮ್ಮ ಎಂಬವರು ಮೃತಪಟ್ಟಿದ್ದು, ಅಕ್ಕ ಪಕ್ಕದ ಮನೆಗಳಿಗೂ ಹಾನಿಯಾಗಿದೆ. ಈ ಸ್ಫೋಟ ಹೇಗೆ ಸಂಭವಿಸಿತು? ಇದು ಕೇವಲ ಅನಿಲ ಸಿಲಿಂಡರ್ ಸ್ಫೋಟದಿಂದ ಸಂಭವಿಸಿದ್ದೆ ಅಥವಾ ಬೇರೆ ಏನಾದರೂ ಕಾರಣವಿದೆಯೆ ಎಂಬುದರ ಕುರಿತು ಎಫ್‍ಎಸ್‍ಎಲ್ ವರದಿ ಬರಬೇಕು ಎಂದು ಹೇಳಿದರು.

ಜನ ಭಯ ಭೀತರಾಗಿದ್ದಾರೆ. ಈ ಘಟನೆ ಕುರಿತು ಸಂಪೂರ್ಣ ತನಿಖೆ ಆಗಬೇಕು. ಮೃತಪಟ್ಟಿರುವ ವೃದ್ಧೆ ಕುಟುಂಬಕ್ಕೆ ಸರಕಾರ ಪರಿಹಾರ ಕೊಡಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ಶಾಸಕ ಬೈರತಿ ಬಸವರಾಜ ಮಾತನಾಡಿ, ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಆಗಿರುವ ಈ ಘಟನೆ ನೋಡಿ ದಿಗ್ಭ್ರಾಂತನಾಗಿದ್ದೇನೆ. ಅಡುಗೆ ಅನಿಲ ಸಿಲಿಂಡರ್ ಸೋರಿಕೆಯೆ ಅಥವಾ ಬೇರೆ ಏನಾದರೂ ಕಾರಣವಿದೆಯೆ ಎಂಬುದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಸಿಲಿಂಡರ್ ಸ್ಫೋಟದಿಂದ ಇಷ್ಟು ದೊಡ್ಡ ಪ್ರಮಾಣದ ಹಾನಿ ಸಂಭವಿಸುವುದು ಅನುಮಾನ ಎಂದು ಹೇಳಿದರು.

ಮನೆಯಲ್ಲಿ ಸ್ಫೋಟಕ ಏನಾದರೂ ಶೇಖರಿಸಿ ಇಟ್ಟಿದ್ರಾ? ಅದು ಸ್ಫೋಟಗೊಂಡು ಈ ದುರ್ಘಟನೆ ಆಗಿದೆಯೇ? ಅನ್ನೋದು ಗೊತ್ತಾಗಬೇಕು. ಜನರಲ್ಲಿ ಹಲವಾರು ಅನುಮಾನಗಳು ಮೂಡುತ್ತಿವೆ. ಅವುಗಳನ್ನು ನಿವಾರಣೆ ಮಾಡಲು ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು. ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಬಸವರಾಜ ಭರವಸೆ ನೀಡಿದರು.

ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾತನಾಡಿ, ಅಕ್ಕಯ್ಯಮ್ಮ, ಅವರ ಮಗ ಹಾಗೂ ಮೊಮ್ಮಕ್ಕಳು ಮನೆಯಲ್ಲಿ ಇದ್ದರು. ಗ್ಯಾಸ್ ಸ್ಟವ್ ಆನ್ ಮಾಡುವಾಗ ಘಟನೆ ಆಗಿದೆ ಅಂತಾ ಹೇಳುತ್ತಿದ್ದಾರೆ. ಇಡೀ ಮನೆ ಧ್ವಂಸ ಆಗಿದೆ. ತನಿಖೆ ಕೈಗೊಳ್ಳಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News