×
Ad

‘ಪ್ರಮಾಣ ಪತ್ರದೊಂದಿಗೆ ಉದ್ಯೋಗ’ | ಬಿಎಸ್‍ವಿಟಿ ಸಾಧನೆ ಶ್ಲಾಘನೀಯ: ಎನ್.ಎ.ಹಾರಿಸ್

Update: 2025-10-25 23:38 IST

ಬೆಂಗಳೂರು: ಒಂದು ವರ್ಷದ ಹಿಂದೆ ಆರಂಭವಾದ ಭಾರತ್ ಸ್ಕೂಲ್ ಆಫ್ ವರ್ಟಿಕಲ್ ಟ್ರಾನ್ಸ್ ಪೋರ್ಟೇಶನ್(ಬಿಎಸ್‍ವಿಟಿ) ಸಂಸ್ಥೆಯು ಕೊಟ್ಟ ಮಾತಿನಂತೆ ತನ್ನ ವಿದ್ಯಾರ್ಥಿಗಳಿಗೆ ತರಬೇತಿ ‘ಪ್ರಮಾಣ ಪತ್ರದೊಂದಿಗೆ ಉದ್ಯೋಗ’ವನ್ನು ಕಲ್ಪಿಸಿಕೊಡುತ್ತಿರುವುದು ಶ್ಲಾಘನೀಯ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಶಾಸಕ ಎನ್.ಎ. ಹಾರಿಸ್ ತಿಳಿಸಿದರು.

ಶನಿವಾರ ನಗರದ ಎಂ.ಜಿ.ರಸ್ತೆಯಲ್ಲಿರುವ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಿದ್ದ ಬಿಎಸ್‍ವಿಟಿ ತರಬೇತಿ ಪ್ರಮಾಣ ಪತ್ರ ಹಾಗೂ ಉದ್ಯೋಗ ನೇಮಕಾತಿ ಪತ್ರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರೀಕರಣ ಬೆಳೆದಂತೆ ಬಹುಮಹಡಿ ಕಟ್ಟಡಗಳ ನಿರ್ಮಾಣದ ಪ್ರಮಾಣವು ಹೆಚ್ಚುತ್ತಿದೆ. ಇಲ್ಲಿ ಲಿಫ್ಟ್ ಗಳು, ಎಲಿವೇಟರ್ ಗಳ ಬಳಕೆ ಅತ್ಯಗತ್ಯ. ಬಿಎಸ್‍ವಿಟಿಯವರು ಈ ಕ್ಷೇತ್ರದ ಬಗ್ಗೆ ಗಮನ ಹರಿಸಿ ತನ್ನ ವಿದ್ಯಾರ್ಥಿಗಳಿಗೆ ಆರು ತಿಂಗಳು, 9 ತಿಂಗಳು ತರಬೇತಿ ನೀಡಿ, ಅವರಿಗೆ ಉದ್ಯೋಗ ಗ್ಯಾರಂಟಿಯನ್ನು ನೀಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾಭ್ಯಾಸ ಇದ್ದರೂ ಉದ್ಯೋಗ ಸಿಗದೆ ಪರದಾಡುವವರು ಇದ್ದಾರೆ. ಆದರೆ, ಇಲ್ಲಿ ನಿಮಗೆ ಪ್ರಮಾಣ ಪತ್ರದ ಜೊತೆಗೆ ಉದ್ಯೋಗವು ಸಿಗುತ್ತಿದೆ. ನೀವು ಅದೃಷ್ಟವಂತರು. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿ, ನಿಮಗೆ ಉದ್ಯೋಗ ಕೊಡುತ್ತಿರುವ ಸಂಸ್ಥೆಯ ಯಶಸ್ಸಿಗೆ ದುಡಿಯುವ ಮೂಲಕ ನಿಮ್ಮ ಕೌಶಲ್ಯಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಿ ಎಂದು ಹಾರಿಸ್ ಕರೆ ನೀಡಿದರು.

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಎಸ್.ಆರ್.ಮೆಹ್ರೋಝ್ ಖಾನ್ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಯುವಕರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ನಿರುದ್ಯೋಗ ಪ್ರಮಾಣವು ಶೇ.4.3 ರಿಂದ 2.4ಕ್ಕೆ ಇಳಿದಿದೆ. ಇದಕ್ಕೆ ಸರಕಾರದ ನೀತಿಗಳು ಹಾಗೂ ಖಾಸಗಿ ವಲಯದ ಪ್ರಯತ್ನಗಳು ಕಾರಣ ಎಂದು ಹೇಳಿದರು.

ಕರ್ನಾಟಕದ ಜಿಎಸ್‍ಡಿಪಿ ಪ್ರಮಾಣವು ದೇಶದ ಜಿಡಿಪಿಗಿಂತ ಹೆಚ್ಚಿದೆ. ಜಿಎಸ್‍ಟಿ ಸಂಗ್ರಹದಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಪಂಚ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 53 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದ್ದೇವೆ. ಉದ್ಯೋಗಾವಕಾಶಗಳು ಹೆಚ್ಚಳವಾಗಿ, ಮಹಿಳೆಯರಿಗೆ ಹೆಚ್ಚು ಅವಕಾಶಗಳು ಸಿಗುತ್ತಿವೆ ಎಂದು ಅವರು ಹೇಳಿದರು.

ಬಿಎಸ್‍ವಿಟಿ ವ್ಯವಸ್ಥಾಪಕ ನಿರ್ದೇಶಕ ಮುಶ್ತಾಖ್ ಅಹ್ಮದ್ ಮಾತನಾಡಿ, ಬಿಎಸ್‍ವಿಟಿಯನ್ನು ಆರಂಭ ಮಾಡಿದ ದಿನಕ್ಕಿಂತ ಇಂದು ನನಗೆ ಹೆಚ್ಚು ಸಂತೋಷವಾಗುತ್ತಿದೆ. ನಮ್ಮ ಪ್ರಯತ್ನ ಫಲ ಕೊಟ್ಟಿದೆ. ಕೌಶಲ್ಯಯುಕ್ತ ವ್ಯಕ್ತಿಗಳನ್ನು ಕೌಶಲ್ಯಯುಕ್ತ ವ್ಯಕ್ತಿಗಳು ಮಾತ್ರ ಸ್ಥಾನಪಲ್ಲಟ ಮಾಡಬಲ್ಲರು. ನಿಮಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗಾವಕಾಶವನ್ನು ಕಲ್ಪಿಸಿದ್ದೇವೆ. ಇನ್ನೂ ನೀವು ನಿಮ್ಮ ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಗಳಿಸಬೇಕು ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಬಿಎಸ್‍ವಿಟಿ ಸಲಹಾ ಮಂಡಳಿಯ ಮುಖ್ಯಸ್ಥ ಭಾಸ್ಕರ್ ರಾವ್, ಬಿಎಸ್‍ವಿಟಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಸಂತೋಷ್ ಕುಮಾರ್, ಕ್ಯಾಪಿಟಲ್ ಗೂಡ್ಸ್ ಅಂಡ್ ಸ್ಟ್ರಾಟೆಜಿಕ್ ಸ್ಕಿಲ್ ಕೌನ್ಸಿಲ್ ಸಿಇಒ ಶಾಲಿನಿ ಸಿಂಗ್, ಸಾರ್ವಜನಿಕ ಸಂಪರ್ಕ ನಿರ್ದೇಶಕ ಮುಹಮ್ಮದ್ ಆಸಿಫ್ ಹಯಾತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News