ಪರಿಶಿಷ್ಟರ ಒಳಮೀಸಲಾತಿಗೆ ಸರಕಾರದ ಕ್ರಮ ಸ್ವಾಗತಾರ್ಹ: ಡಿ.ಜಿ. ಸಾಗರ್
ಬೆಂಗಳೂರು: ಸಾಮಾಜಿಕ ನ್ಯಾಯದಡಿಯಲ್ಲಿ ಅವಕಾಶ ವಂಚಿತ ಸಮುದಾಯಗಳಿಗೆ ಎಲ್ಲ ಕ್ಷೇತ್ರಗಳಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ನ್ಯಾ.ನಾಗಮೋಹನ್‍ದಾಸ್ ನೇತೃತ್ವದ ಏಕಸದಸ್ಯ ಆಯೋಗ ವರದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ್ ತಿಳಿಸಿದ್ದಾರೆ.
ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಿಕೊಡುವ ಮೂಲಕ ಸಮುದಾಯಗಳನ್ನು ಸಾಮಾಜಿಕ, ಶೈಕ್ಷಣಿ, ಅರ್ಥಿಕ ಹಾಗೂ ರಾಜಕೀಯ ಸಬಲಿಕರಣಗೊಳಿಸುವ ಪರಿಣಾಮಕಾರಿ ಯೋಜನೆ ಇದಾಗಿದೆ. ಪರಿಶಿಷ್ಟ ಸಮುದಾಯಗಳ ಮೂರು ದಶಕಗಳ ಬೇಡಿಕೆ ಹಾಗೂ ಹೋರಾಟ ಕೊನೆಗೂ ಗೆಲವು ಕಂಡಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿಗಳನ್ನು ಮೂರು ವಿಭಾಗಗಳಾಗಿ ವರ್ಗಿಕರಣ ಮಾಡಿ ಶೇ.17ರಷ್ಟು ಎಸ್‍ಸಿ ಮೀಸಲು ಪ್ರಮಾಣವನ್ನು ಬಲಗೈ (ಹೊಲೆಯ/ಛಲವಾದಿ) ಶೇ.6 ಹಾಗೂ ಎಡಗೈ (ಮಾದಿಗ) ಶೇ.6 ಹಾಗೂ ಭೋವಿ, ಲಮಾಣಿ, ಕೊರಚ, ಕೊರಮ ಸಹಿತ ಇತರೆ ಜಾತಿಗಳಿಗೆ ಶೇ.5ರಷ್ಟು ಒಳಮೀಸಲಾತಿ ಹಂಚಿಕೆ ಮಾಡಲಾಗಿದೆ. ಇಂತಹ ಐತಿಹಾಸಿಕ ನಿರ್ಣಯ ತೆಗೆದುಕೊಂಡಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಸಂಪುಟ ಎಲ್ಲ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಸಾಗರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ರಾಜ್ಯ ಸಂಚಾಲಕ ಅಣ್ಣಯ್ಯ, ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌಧೆ, ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ ಅಣ್ಣಯ್ಯ, ಜಿಲ್ಲಾ ಸಂಚಾಲಕರಾದ ವೈ.ಸಿ. ಮಯೂರ್, ಮಲ್ಲೇಶ ಚಿಂಚನಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.