×
Ad

ಬ್ಯಾರಿಗಳು ನಮಗಿಂತ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ, ಅವರನ್ನು ಮುಸ್ಲಿಮರು ಎಂದು ತಳ್ಳಿಬಿಡಲು ಆಗುತ್ತದೆಯೇ? : ಡಿ.ಕೆ.ಶಿವಕುಮಾರ್

"ಬಾನು ಮುಷ್ತಾಕ್ ಬೆಟ್ಟ ಹತ್ತಬಾರದು,‌ ಉದ್ಘಾಟನೆ ಮಾಡಬಾರದು ಎನ್ನುವುದು ಎಷ್ಟು ಸರಿ?"

Update: 2025-08-27 15:49 IST

ಬೆಂಗಳೂರು : ಬ್ಯಾರಿಗಳು ನಮಗಿಂತ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ಅವರನ್ನು ಮುಸ್ಲಿಮರು ಎಂದು ತಳ್ಳಿಬಿಡಲು ಆಗುತ್ತದೆಯೇ? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಬುಧವಾರ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹೇಗೆ ನೀರಿಗೆ, ಬೆಳಕಿಗೆ, ಗಾಳಿಗೆ ಯಾವುದೇ ಜಾತಿ ಧರ್ಮ ಇಲ್ಲವೋ, ಅದೇ ರೀತಿ ದೇವರಿಗೂ ಧರ್ಮವಿಲ್ಲ. ಪ್ರಾರ್ಥನೆಯು ಯಾರೊಬ್ಬರ ಸ್ವತ್ತಲ್ಲ. ನಾನು ನಂಬಿರುವ ಗುರುಗಳು ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದಿದ್ದಾರೆ ಎಂದು ಹೇಳಿದರು.

ಚಾಮುಂಡಿ ಬೆಟ್ಟ ಬರೀ ಹಿಂದೂಗಳ ಆಸ್ತಿಯಲ್ಲ ಎನ್ನುವ ಹೇಳಿಕೆಗೆ ಸಂಸದ ಯದುವೀರ ಹಾಗೂ ಪ್ರತಿಪಕ್ಷಗಳ ಟೀಕೆಯ ಬಗ್ಗೆ ಕೇಳಿದಾಗ, ಚಾಮುಂಡೇಶ್ವರಿ ಎಲ್ಲಾ ಧರ್ಮದವರಿಗೂ ಆಶೀರ್ವಾದ ಮಾಡುವಂತಹ ದೇವರು.‌ ರಾಜ ವಂಶಸ್ಥರು ಹಾಗೂ ನಂತರ ಬಂದ ಸರಕಾರಗಳು ಚಾಮುಂಡಿ ತಾಯಿಯನ್ನು ನಾಡದೇವಿ ಎಂದು ಕರೆದಿವೆ. ಈ ದೇಗುಲ ಸಾರ್ವಜನಿಕರ ಆಸ್ತಿ. ನಾಡಧ್ವಜ, ನಾಡದೇವಿ, ರಾಷ್ಟ್ರಧ್ವಜ ಹಾಗೂ ದೇವರಿಗೆ ಜಾತಿ, ಧರ್ಮ ಬಣ್ಣದ ರಾಜಕೀಯ ಲೇಪನ‌ ಮಾಡುವ ಅಗತ್ಯವಿಲ್ಲ ಎಂದರು.

ನಾಡದೇವಿಯ ದೇವಸ್ಥಾನಕ್ಕೆ ಕೇವಲ ಹಿಂದೂಗಳು‌ ಮಾತ್ರ ಬರಬೇಕು ಎನ್ನುವ ನಿಯಮವಿದೆಯೇ? ಒಂದಷ್ಟು ಸಮುದಾಯದವರು ಬೌದ್ಧ, ಕ್ರಿಶ್ಚಿಯನ್, ಇಸ್ಲಾಂ ಧರ್ಮಕ್ಕೆ ಸೇರಿಕೊಂಡಿದ್ದಾರೆ. ಇವರನ್ನು ದೇವಾಲಯಕ್ಕೆ ಬರಬೇಡಿ ಎಂದು ಹೇಳಲು ಆಗುತ್ತದೆಯೇ? ತಂದೆ-ತಾಯಿ ಬೇರೆ, ಬೇರೆ ಧರ್ಮಕ್ಕೆ ಸೇರಿರುತ್ತಾರೆ. ಇಂತಹ ಮಕ್ಕಳ ಆಚರಣೆ ಬೇರೆ,‌‌ ಬೇರೆ ಇರುತ್ತದೆ. ಬ್ಯಾರಿಗಳು ನಮಗಿಂತ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ಅವರನ್ನು ಮುಸ್ಲಿಮರು ಎಂದು ತಳ್ಳಿಬಿಡಲು ಆಗುತ್ತದೆಯೇ? ಮುಸ್ಲಿಮರು ಶ್ಲೋಕವೊಂದನ್ನು ಪಠಣ ಮಾಡುವ ವಿಡಿಯೋ ನೋಡಿದೆ. ಅವರು ಸಹ ನಮ್ಮ ಧರ್ಮದ ಬಗ್ಗೆ ತಿಳಿದುಕೊಂಡಿದ್ದಾರೆ ಎಂದರು.

ಮಹಾರಾಜರ ಆಳ್ವಿಕೆ ಕಾಲದಲ್ಲಿಯೂ ವಿದೇಶಗಳಿಂದ ಅತಿಥಿಗಳನ್ನು ದಸರಾಕ್ಕೆ ಆಹ್ವಾನ ಮಾಡುತ್ತಿದ್ದರು. ವಿದೇಶಿ ಧರ್ಮಿಯರೂ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಚರ್ಚ್,‌ ಮಸೀದಿ, ಜೈನ ಬಸದಿ, ಗುರುದ್ವಾರ ಹೀಗೆ ಎಲ್ಲಾ ಕಡೆ ನಮ್ಮನ್ನು ಒಳಗೆ ಬಿಡುವುದಿಲ್ಲವೇ. ಈ ಹಿಂದೆ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟನೆ ಮಾಡಿದರು. ಆದರೆ ಈಗ ಬಾನು ಮುಷ್ತಾಕ್ ಅವರು ಬೆಟ್ಟ ಹತ್ತಬಾರದು,‌ ಉದ್ಘಾಟನೆ ಮಾಡಬಾರದು ಎನ್ನುವುದು ಎಷ್ಟು ಸರಿ? ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News